ಕುಂದಾಪುರ, ಡಿ 20(MSP): ಹೈನುಗಾರಿಕೆಯನ್ನು ವ್ಯವಸ್ಥಿತ ಹಾಗೂ ಕ್ರಮಬದ್ಧವಾಗಿ ಶೃದ್ದೆಯಿಂದ ಮಾಡಿದರೆ ಅತ್ಯಂತ ಲಾಭದಾಯಕ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು, ನಿದರ್ಶನಗಳು ಇವೆ. ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಕೈಲ್ಕೆರೆ ಎಂಬಲ್ಲಿ ವಿದ್ಯಾವಂತ ಯುವತಿರ್ಯೊರು ಪಾರಂಪರಿಕ ಹೈನುಗಾರಿಕೆಯನ್ನು ಆಧುನಿಕ ಶೈಲಿಯಲ್ಲಿ ಪ್ರವರ್ಧಮಾನಕ್ಕೆ ತಂದಿರುವ ಯಶೋಗಾಥೆ ಇದು.
ಕೈಲ್ಕೆರೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಚೈತ್ರಾ ವಿ ಅಡಪ ಎನ್ನುವವರೇ ಈ ಹೈನೋದ್ಯಮದ ಸಾಧಕಿ. ಓದಿದ್ದು ಬಿ.ಎ ಪದವಿ.ಅದರೆ ಅವರು ಆರಿಸಿಕೊಂಡಿದ್ದು ಮಾತ್ರ ಹೈನೋದ್ಯಮ. ಕಾರಣ ಅವರಿಗೆ ಹೈನುಗಾರಿಕೆಯಲ್ಲಿ ಇರುವ ಅಪರಿಮಿತ ಆಸಕ್ತಿ. ಮನೆಯಲ್ಲಿ ಅನೂಚಾನವಾಗಿ ನಡೆದುಕೊಂಡ ಬಂದ ಹೈನುಗಾರಿಕೆ. ಆದರೆ ಅದು ಪಾರಂಪರಿಕ ವಿಧಾನದ ಮೂಲಕ ನಡೆಯುತ್ತಿತ್ತು. ಅದಕ್ಕೆ ಆಧುನಿಕತೆಯ ಸ್ಪರ್ಶ ನೀಡಿದ್ದು ಚೈತ್ರಾ ಅವರು. 2002ರಲ್ಲಿ ಇವರು ಹೈನುಗಾರಿಕೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡರು. ವಿವಿಧ ಆಧುನಿಕ ವಿಧಾನಗಳನ್ನು ಅಳವಡಿಸಿದರು. ಸುಧಾರಿತ ತಳಿಗಳನ್ನು ಖರೀದಿಸಿದರು. ಮಾದರಿ ಹಟ್ಟಿ ರಚನೆ, ಹುಲ್ಲು ನಾಟಿ, ಗೋಬರ್ ಅನಿಲ ಸ್ಥಾವರ ನಿರ್ಮಾಣ, ಸ್ಲರಿ ನೇರವಾಗಿ ತೋಟಕ್ಕೆ ಸಿಂಪರಣೆಯ ತಾಂತ್ರಿಕತೆ, ಹುಲ್ಲು ಕತ್ತರಿಸುವ ಯಂತ್ರ, ಅಡಿಕೆ ಹಾಳೆ ಪಶು ಆಹಾರವನ್ನಾಗಿಸುವ ಯಂತ್ರ, ಹಾಲು ಹಿಂಡುವ ಯಂತ್ರಗಳ ಅಳವಡಿಕೆ ಮಾಡಿಕೊಂಡು ಯಶಸ್ವಿ ಹೈನುಗಾರರಾಗಿ ಮೂಡಿ ಬಂದಿದ್ದಾರೆ.
ಪ್ರಸ್ತುತ ಇವರ ಬಳಿ ೩೦ಕ್ಕೂ ಹೆಚ್ಚು ಹಾಲು ಕೊಡುವ ಹಸುಗಳಿವೆ. ಜೆರ್ಸಿ, ಎಚ್.ಎಫ್ ಹಸುಗಳ ಜೊತೆಗೆ ಸಾವರ್, ಗೀರ್ ತಳಿಯ ಹಸುಗಳು ಇವರ ಬಳಿ ಇವೆ. ಪ್ರಸ್ತುತ ೧೨೫ ಲೀಟರ್ ಹಾಲನ್ನು ಡೇರಿಗೆ ನೀಡುತ್ತಿದ್ದಾರೆ.
ಹೈನುಗಾರಿಕೆಯ ಬಗ್ಗೆ ನಿರಂತರ ಅಧ್ಯಯನ ಮಾಡುತ್ತಿರುವ ಇವರಿಗೆ ಕೃಷಿ ಕುಟುಂಬದ ಹಿನ್ನೆಲೆ ಹಾಗೂ ಕೃಷಿಕರೂ ಆಗಿರುವುದರಿಂದ ಗೋಮೂತ್ರ, ಸಗಣಿ ಸ್ಲರಿ ಸಂಪೂರ್ಣ ತೋಟಕ್ಕೆ ಬಳಕೆಯಾಗುತ್ತದೆ. ಸುಮಾರು ೩ ಎಕರೆ ಪ್ರದೇಶದಲ್ಲಿ ನೆಫಿಯರ್ ತಳಿಯ ಹುಲ್ಲು ಬೆಳೆಸುತ್ತಿದ್ದು, ಅದಕ್ಕೆ ಸಗಣಿ ಸ್ಲರಿಯನ್ನು ಪಂಪ್ ಮಾಡಿ ಸ್ಪ್ರಿಂಕ್ಲರ್ ಮೂಲಕ ಹಾಯಿಸುತ್ತಿದ್ದಾರೆ. ಇದರಿಂದ ಹುಲ್ಲು ನಿರೀಕ್ಷೆಗೂ ಮೀರಿ ಹುಲುಸಾಗಿ ಬೆಳೆಯುತ್ತದೆ. ಉತ್ತಮ ಪೋಷಕಾಂಶಯುಕ್ತವಾಗಿರುತ್ತದೆ.
ಹಟ್ಟಿಯಲ್ಲಿ ಮೂರು ಸಾಲುಗಳಲ್ಲಿ ದನಗಳನ್ನು ಕಟ್ಟಲಾಗಿದೆ. ಸ್ವಚ್ಛತೆಗೆ ಒತ್ತು ನೀಡಲಾಗಿದೆ. ಸೊಳ್ಳೆ, ನುಸಿಗಳಿಗೆ ಅವಕಾಶವೇ ಇಲ್ಲದಂತೆ ಸ್ವಚ್ಛತೆ ಕಾಪಾಡಲಾಗಿದೆ. ಕರುಗಳ ವಿಭಾಗವೂ ಕೂಡ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗುತ್ತಿದೆ. ಶ್ರದ್ದೆ ಹಾಗೂ ಆಸಕ್ತಿಯಿಂದ ದನಗಳ ಪೋಷಣೆ, ಕರುಗಳ ಆರೈಕೆ, ಪೋಷಕಾಂಶಗಳ ನಿರ್ವಹಣೆ ಮಾಡುತ್ತಿರುವುದರಿಂದ ಯಶಸ್ಸು ಸಾಧ್ಯವಾಗಿದೆ.
ಇವರ ಮಾದರಿ ಹೈನುಗಾರಿಕೆಯನ್ನು ನೋಡಲು, ಅಧ್ಯಯನ ಮಾಡಲು ಬೇರೆ ಬೇರೆ ಭಾಗದಿಂದ ಹಲವಾರು ಅಧ್ಯಯನ ತಂಡಗಳು ಭೇಟಿ ನೀಡಿವೆ. ಹೊಸತಾಗಿ ಹೈನುಗಾರಿಕೆ ಮಾಡುವ ಉತ್ಸಾಹಿಗಳಿಗೆ ಇವರು ಮಾರ್ಗದರ್ಶನ ನೀಡಿದ್ದಾರೆ.
ಹೈನುಗಾರಿಕೆಯ ಜೊತೆಗೆ ಅಡಿಕೆ ತೋಟ, ತೆಂಗು, ಕಾಳುಮೆಣಸು, ಭತ್ತ ಬೇಸಾಯದಲ್ಲಿಯೂ ಇವರು ಅನುಭವಿ. ಕೃಷಿಯ ಬಗ್ಗೆ ಯುವ ಜನಾಂಗ ಹಿಂದೆಟು ಹಾಕುತ್ತಿರುವವರ ನಡುವೆ ಇವರು ಮಾದರಿಯಾಗಿ ನಿಲ್ಲುತ್ತಾರೆ.
ಚೈತ್ರಾ ಅವರು ಸಮಾಜಮುಖಿ ಚಿಂತನೆಗಳನ್ನು ಮೈಗೂಡಿಸಿಕೊಂಡವರು. ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಂಘದ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ, ಕೈಲ್ಕೆರೆ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹೈನುಗಾರಿಕೆಯ ಬಗ್ಗೆ ಸದಾ ಅಧ್ಯಯನಾಶೀಲರಾಗಿದ್ದುಕೊಂಡು ಹೊಸ ಹೊಸ ಆವಿಷ್ಕಾರಗಳನ್ನು ತನ್ನ ಹೈನುಗಾರಿಕೆಯಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಚಿಂತನೆಗಳನ್ನು ನಡೆಸುತ್ತಿದ್ದಾರೆ. ರೈತರ ದಿನಾಚರಣೆಯ ಸಂದರ್ಭದಲ್ಲಿ ಇಂಥಹ ಮಹಿಳಾ ಸಾಧಕಿಯರನ್ನು ಅಭಿನಂದಿಸಲೇ ಬೇಕು.
ಇವರು ಸುಮಾರು ೩ ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಹಸಿರು ಹುಲ್ಲು ಬೆಳೆಯುತ್ತಿದ್ದಾರೆ. ಸಾವಯವ ಮಾದರಿಯಲ್ಲಿ ಅತ್ಯುತ್ಕೃಷ್ಟವಾದ ಹುಲ್ಲು ಬೆಳೆಸುತ್ತಿರುವುದನ್ನು ಗಮನಿಸಿದ ಕೆಎಂಎಫ್ ಪ್ರಶಸ್ತಿ ನೀಡಿ ಗೌರವಿಸಿದೆ. ಉತ್ತಮ ಹಸಿರು ಹುಲ್ಲು ಬೆಳೆಗಾರರು ಎಂದು ಗುರುತಿಸಿದೆ. ಇದು ಸ್ಥಳೀಯ ಹಾಲು ಉತ್ಪಾದಕರ ಸಂಘಕ್ಕೂ ಹೆಮ್ಮೆ ತಂದಿದೆ. ಹೊಸತಾಗಿ ಹುಲ್ಲು ನಾಟಿ ಮಾಡುವವರಿಗೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹುಲ್ಲು ಬೆಳೆಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಅಲ್ಲದೇ ಸ್ಲರಿ ನೀರು ಸಿಂಪರಣೆಯ ಮಹತ್ವವನ್ನು ಬಿಂಬಿಸಲಾಗುತ್ತಿದೆ.