ಉಡುಪಿ, ಡಿ21(SS): ಕೃಷ್ಣ ನಗರಿ ಉಡುಪಿ ಜಿಲ್ಲೆಯಲ್ಲಿರುವ ಪ್ರಸಿದ್ಧ ಮಠಕ್ಕೆ ಡಿಸೆಂಬರ್ 27ರಂದು ರಾಷ್ಟ್ರಪತಿಗಳು ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ಸನ್ಯಾಸತ್ವ ಸ್ವೀಕರಿಸಿ 80 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 27ರಂದು ರಾಜಾಂಗಣದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ರಾಷ್ಟ್ರಪತಿಗಳು ಆಗಮಿಸಲಿದ್ದಾರೆ. ಪರಿಣಾಮ, ಶ್ರೀ ಕಷ್ಣ ಮಠಕ್ಕೆ ಬೆಳಿಗ್ಗೆ 6 ರಿಂದ ಸಂಜೆ 3 ಗಂಟೆಯವರೆಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.
ನಗರದ ಸಕ್ರ್ಯೂಟ್ ಹೌಸ್ ಮತ್ತು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ, ಭದ್ರತಾ ದೃಷ್ಠಿಯಿಂದ ಉಡುಪಿಯ ಸಂಸ್ಕೃತ ಕಾಲೇಜು ಪಕ್ಕದ ಗೇಟಿನಿಂದ ಸಂಪೂರ್ಣ ರಥಬೀದಿಯ ಸುತ್ತ ಹಾಗೂ ರಾಜಾಂಗಣದ ಸುತ್ತಮುತ್ತ ಇರುವ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಡಿಸೆಂಬರ್ 27 ರ ಬೆಳಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮುಚ್ಚುವಂತೆ ಹಾಗೂ ಸಾರ್ವಜನಿಕರಿಗೆ ಸದ್ರಿ ದಿನದಂದು ಬೆಳಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಶ್ರೀ ಕೃಷ್ಣ ಮಠ ಭೇಟಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.