ತಿರುವನಂತಪುರ. ಡಿ21(SS): ಶಬರಿಮಲೆ ವಿವಾದದ ಪ್ರಮುಖ ನೆಲೆ ಎನಿಸಿರುವ ಪತನಂತಿಟ್ಟ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದಲ್ಲಿ ಪ್ರಮುಖ ರಾಜಕೀಯ ರ್ಯಾಲಿ ನಡೆಯಲಿದೆ.
ಜನವರಿ 6ರಂದು ಇಲ್ಲಿ ಮೋದಿಯವರು ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಜನವರಿ ತಿಂಗಳಿನಲ್ಲೇ ಕೇರಳದಲ್ಲಿ ಬಿಜೆಪಿಯ ಮತ್ತೊಂದು ಸಭೆಯಲ್ಲೂ ಪ್ರಧಾನಿ ಭಾಗವಹಿಸಲಿದ್ದಾರೆ. 27ರಂದು ತ್ರಿಶ್ಶೂರ್ನಲ್ಲಿ ನಡೆಯುವ ಬಿಜೆಪಿ ಯುವ ಮೋರ್ಚಾ ಸಮ್ಮೇಳನವನ್ನು ಮೋದಿ ಉದ್ಘಾಟಿಸಲಿದ್ದಾರೆ.
ಇದುವರೆಗೆ ಶಬರಿಮಲೆ ಪ್ರಕರಣವನ್ನು ಸಮರ್ಥವಾಗಿ ಬಳಸಿಕೊಂಡಿರುವ ರಾಜ್ಯ ಬಿಜೆಪಿಗೆ ಪ್ರಧಾನಿ ನೀಡಲಿರುವ ಭೇಟಿ ದೊಡ್ಡ ಬಲ ತುಂಬಲಿದೆ. ರಾಜ್ಯ ಕಮ್ಯುನಿಸ್ಟ್ ಸರಕಾರ ವಿರುದ್ಧದ ಹೋರಾಟಕ್ಕೂ ಹೊಸ ಶಕ್ತಿ ಲಭಿಸಲಿ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.
ಈಗಾಗಲೇ ಅಯ್ಯಪ್ಪ ಸ್ವಾಮಿ ದೇಗುಲ ಮಹಿಳಾ ಪ್ರವೇಶ ವಿವಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಇದರ ಬೆನ್ನಲ್ಲಿಯೇ ಹಮ್ಮಿಕೊಂಡಿರುವ ಪ್ರಧಾನಿ ಕಾರ್ಯಕ್ರಮಗಳು ಚರ್ಚೆಗೆ ಕಾರಣವಾಗಿವೆ.