ಮೂಡುಬಿದಿರೆ, ಡಿ21(SS): ದ್ವೇಷ ಮತ್ತು ಧರ್ಮ ಹೀಗೆ ವಿಭಜಿಸುವ ಗೋಡೆಗಳನ್ನು ಕಿತ್ತೆಸೆದು ಮಾನವೀಯತೆ ಬೆಸೆಯುವ, ಬಂಧುತ್ವವನ್ನು ಬೆಳೆಸುವುದು ಅಗತ್ಯವಾಗಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಡಾ.ಪೀಟರ್ ಪಾವ್ಲ್ ಸಲ್ದಾನ್ಹ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಗುರುವಾರ ಸಾಯಂಕಾಲ ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆದ ಆಳ್ವಾಸ್ ಕ್ರಿಸ್ಮಸ್ ಸಂಭ್ರಮ 2018 ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಬಂಧುತ್ವ ಎನ್ನುವುದು ಜಾತಿ, ಮತ ಧರ್ಮದ ಎಲ್ಲೆ ಮೀರಿದ ಸಂಬಂಧವಾಗಿದೆ. ನಾವೆಲ್ಲರೂ ಆತ್ಮ ಸಾಕ್ಷಿಗೆ ಸ್ಪಂದಿಸಿ ಒಳಿತನ್ನುಂಟು ಮಾಡುವ ಮತ್ತು ಆ ಮೂಲಕ ಯಾರೂ ಕಸಿದುಕೊಳ್ಳಲಾಗದ ನಿಜವಾದ ಶಾಂತಿಯನ್ನು ಬದುಕಿನಲ್ಲಿ ಅನುಭವಿಸುವವರಾಗಬೇಕು ಎಂದು ತಿಳಿಸಿದರು.
ಈ ವೇಳೆ ಶಿರ್ವ ಡಾನ್ ಬೋಸ್ಕೋ ಸಿ.ಬಿ.ಎಸ್.ಸಿ ಸಂಸ್ಥೆಯ ಪ್ರಾಂಶುಪಾಲ ವಂ.ಮಹೇಶ್ ಡಿಸೋಜ ಕ್ರಿಸ್ಮಸ್ ಸಂದೇಶ ನೀಡಿದರು. ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ನ ಸ್ಥಾಪಕ ಜೋಸೆಫ್ ಡಿಸೋಜ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಡಾ.ಎಂ ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು.