ಕಾರ್ಕಳ, ಡಿ21(SS): ಇಲ್ಲಿನ ಕುಕ್ಕುಂದೂರು ನಕ್ರೆ ಎಂಬಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ವಿದ್ಯಾರ್ಥಿಯೊಬ್ಬನ ನೆರವಿಗೆ ಬಜರಂಗದಳ ಮುಂದಾಗಿದ್ದು, ಕಾರ್ಯಕರ್ತರು ದೇಣಿಗೆ ಸಂಗ್ರಹಿಸಿದ ರೂ. 2,50,000 ಮೊತ್ತವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ಗೀತಾ ಮತ್ತು ವಸಂತ ಎಂಬವರ ಮಗ ಗೌತಮ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ವಿದ್ಯಾರ್ಥಿ. ಮೂಡುಬಿದಿರೆ ದವಳ ಕಾಲೇಜಿನಲ್ಲಿ ಪ್ರಥಮ ಬಿ.ಕಾಮ್ ನ ವಿದ್ಯಾರ್ಥಿಯಾಗಿರುವ ಗೌತಮ್ ಎರಡು ಕಿಡ್ನಿ ವೈಫಲ್ಯದಿಂದ ಕಳೆದ ಹಲವಾರು ದಿನಗಳಿಂದ ಬಳಲುತ್ತಿದ್ದಾನೆ.
ಮಗನ ಸ್ಥಿತಿಯನ್ನು ಸಹಿಸಲಾಗದ ಹೆತ್ತ ತಾಯಿ ತನ್ನ ಒಂದು ಕಿಡ್ನಿಯನ್ನು ಮಗನಿಗೆ ದಾನ ಮಾಡಲು ಮುಂದಾಗಿದ್ದಾರೆ. ವೈದ್ಯರ ಸಲಹೆಯಂತೆ ಕಿಡ್ನಿ ಜೋಡನೆಗೆ 10 ಲಕ್ಷ ತಗಲಬಹುದೆಂದು ಅಂದಾಜಿಸಲಾಗಿದೆ. ಹೀಗಾಗಿ ಬಜರಂಗದಳ ವಿದ್ಯಾರ್ಥಿಯ ನೆರವಿಗೆ ಬೆನ್ನೆಲುಬಾಗಿ ನಿಂತಿದೆ.
ಮನೆಯ ಪರಿಸ್ಥಿತಿ ಅವಲೋಕಿಸಿದ ಬಜರಂಗದಳ ಸಂಘಟನೆಯು ಸಾಮಾಜಿಕ ಸೇವೆಗೆ ಮುಂದಾಗಿ, ಅದಕ್ಕಾಗಿ ದೇಣಿಗೆ ಸಂಗ್ರಹಿಸಿದೆ. ಬಜರಂಗದಳ ಜಿಲ್ಲಾ ಸುರಕ್ಷಾ ಪ್ರಮುಖ ಮಹೇಶ್ ಬೈಲೂರು, ಕಾರ್ಕಳ ತಾಲೂಕು ಬಜರಂಗದಳ ಸಹಸಂಚಾಲಕರಾದ ಗುರುಪ್ರಸಾದ್ ನಾರಾವಿ, ಕಾರ್ಕಳ ನಗರ ಸಂಚಾಲಕ ರಾಘವೇಂದ್ರ ಕುಲಾಲ್, ದೀಪಕ್ ಶೆಟ್ಟಿ ಬೈಲೂರು ತಂಡದ ನೇತೃತ್ವದಲ್ಲಿ ಸಂಗ್ರಹಿಸಿದ ಮೊತ್ತವನ್ನು ವಿದ್ಯಾರ್ಥಿಯ ಮನೆ ಮಂದಿಗೆ ನೀಡುವ ಮೂಲಕ ಜನ ಮನ್ನಣೆಗೆ ಪಾತ್ರರಾಗಿದ್ದಾರೆ.
ಬಜರಂಗದಳ ಸಂಘಟನೆಯ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.