ಮಂಗಳೂರು, ಡಿ21(SS): ಏರ್ ಇಂಡಿಯಾ ಸಹಿತ ಕೆಲವು ವಿಮಾನಯಾನ ಕಂಪೆನಿಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು, ಹೊಸದಿಲ್ಲಿ, ಗೋವಾ, ಹಾಗೂ ಪುಣೆಗೆ ಶೀಘ್ರದಲ್ಲೇ ಹೊಸ ವಿಮಾನ ಯಾನ ಸೇವೆ ಪ್ರಾರಂಭಿಸಲು ಒಪ್ಪಿಗೆ ಸೂಚಿಸಿವೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಚ್ಚುವರಿ ವಿಮಾನ ಸೇವೆ ಪ್ರಾರಂಭಿಸುವುದು ಸೇರಿದಂತೆ ವಿಮಾನ ನಿಲ್ದಾಣದ ಸುಧಾರಣೆಗೆ ಹೊಸದಿಲ್ಲಿಯಲ್ಲಿ ಅಧಿಕಾರಿಗಳ ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರು ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದಾಗ ಭರವಸೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ, ಹೊಸದಿಲ್ಲಿಯಲ್ಲಿ ಕೇಂದ್ರ ಸರಕಾರದ ಜತೆ ಕಾರ್ಯದರ್ಶಿ ಉಷಾ ತಾಧೀ ಅವರ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಇಂಡಿಗೋ, ಸ್ಪೈಸ್ ಜೆಟ್ ಹಾಗೂ ಏರ್ ಇಂಡಿಯಾ ಸಂಸ್ಥೆಗಳ ಅಧಿಕಾರಿಗಳ ಸಭೆ ನಡೆಯಿತು.
ಈ ಸಭೆಯಲ್ಲಿ ಮಂಗಳೂರಿನಿಂದ ಶೀಘ್ರವೇ ಹೊಸ ಹಾಗೂ ಹಾಲಿ 4-5 ಮಾರ್ಗಗಳಲ್ಲಿ ವಿಮಾನಯಾನ ಸೇವೆ ಪ್ರಾರಂಭಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಏರ್ ಇಂಡಿಯಾ ಎಕ್ಸ್ಪ್ರೆಸ್ನ ಮಂಗಳೂರು-ಕುವೈಟ್ ವಿಮಾನದ ಹಾರಾಟದ ಸಮಯ ಬದಲಿಸಬೇಕೆಂಬುದು ಗಲ್ಫ್ ಕನ್ನಡಿಗರ ಬಹುದಿನಗಳ ಬೇಡಿಕೆ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ.
ಸಮಯ ಬದಲಿಸುವ ವಿಷಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀರ್ಮಾನವಾಗಬೇಕು. ಇದಕ್ಕೆ ಕುವೈಟ್ನ ವಿಮಾನಯಾನ ಸಂಸ್ಥೆಯ ಒಪ್ಪಿಗೆಯೂ ಬೇಕಿದೆ. ಹೀಗಾಗಿ ಶೀಘ್ರವೇ ಅಲ್ಲಿನ ಅಧಿಕಾರಿಗಳೊಂದಿಗೂ ಮಾತುಕತೆ ನಡೆಸಿ, ಕನ್ನಡಿಗರಿಗೆ ಅನುಕೂಲವಾಗುವಂತೆ ಸಮಯ ಬದಲಾವಣೆಗೆ ಕ್ರಮ ಕೈಗೊಳ್ಳುವ ಭರವಸೆ ಏರ್ ಇಂಡಿಯಾ ಎಕ್ಸ್ಪ್ರೆಸ್ ಅಧಿಕಾರಿಗಳಿಂದ ದೊರೆತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.