ಮಂಗಳೂರು, ಡಿ. 21(SM): ನದಿಯಲ್ಲಿ ಸ್ನಾನ ಮಾಡುವ ವೇಳೆ ಸ್ನೇಹಿತ ಸುರೇಶ್ನನ್ನು ಕೊಲೆ ಮಾಡಿರುವ ಪೈಕಿ ಇಬ್ಬರ ಸಾಬೀತಾಗಿದ್ದು, ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಬಂಟ್ವಾಳದ ನಾವೂರು ನಿವಾಸಿ ಹರೀಶ್ ಯಾನೆ ಕೋಟಿ ಪೂಜಾರಿ (48) ಹಾಗೂ ಹೇಮಚಂದ್ರ ಯಾನೆ ಗುರು (24) ಶಿಕ್ಷೆಗೊಳಗಾದ ಅಪರಾಧಿಗಳಾಗಿದ್ದಾರೆ.
ಇನ್ನು ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದ ಮೂವರನ್ನು ಕೋರ್ಟ್ ಖುಲಾಸೆಗೊಳಿಸಿದೆ. ನೀಲಪ್ಪ ಪೂಜಾರಿ (56), ವಸಂತ (40) ಹಾಗೂ ರಮೇಶ್ (29) ಸಾಕ್ಷಾಧಾರದ ಕೊರತೆಯಿಂದ ಖುಲಾಸೆಗೊಂಡಿದ್ದಾರೆ.
ಇನ್ನು ಅಪರಾಧಿಗಳಿಗೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜೀವಾವಧಿ ಶಿಕ್ಷೆ ಹಾಗೂ ಸಾಕ್ಷ್ಯಗಳ ನಾಶಕ್ಕೆ ಸಂಬಂಧಿಸಿದಂತೆ 1 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಕೊಲೆಯಾದವರ ಪತ್ನಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಪಡೆಯಲು ಅವಕಾಶವಿದೆ ಎಂಬುವುದಾಗಿಯೂ ಕೂಡ ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.
ಕೊಲೆಯಾದ ಸುರೇಶ್ ಮತ್ತು ಪ್ರಮುಖ ಆರೋಪಿ ಹರೀಶ್ ಮಧ್ಯೆ ಕೆಲವು ವರ್ಷಗಳ ಹಿಂದೆ ವೈಮನಸ್ಸು ಮೂಡಿತ್ತು. ಈ ನಡುವೆಯೇ ೨೦೧೫ರಲ್ಲಿ ನಾವೂರು ಬಳಿಯ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಅವರು ಭಾಗವಹಿಸಿದ್ದರು. ಈ ಸಂದರ್ಭ ಸುರೇಶ್ನನ್ನು ನೇತ್ರಾವತಿ ನದಿ ಹರಿಯುವ ಗೋವಿನ ಪಾಡಿ ಎಂಬಲ್ಲಿಗೆ ಕರೆದೊಯ್ದು ಎಲ್ಲರೂ ಜತೆಯಾಗಿ ಸ್ನಾನ ಮಾಡಿದ್ದರು. ಬಳಿಕ ಸುರೇಶ್ನನ್ನು ಸ್ನೇಹಿತರೆಲ್ಲ ಸೇರಿಕೊಂಡು ಕೊಲೆ ಮಾಡಿದ್ದರು ಎನ್ನಲಾಗಿದೆ.
ನಂತರ ಸುರೇಶ್ ಪತ್ನಿ ಸುನಂದ ಅವರಿಗೆ ಕರೆ ಮಾಡಿ ಸುರೇಶ್ ನೇತ್ರಾವತಿ ನದಿಗೆ ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದರು. ಈ ಬಗ್ಗೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಬಂಟ್ವಾಳ ಪೊಲೀಸರು ಅನುಮಾನಗೊಂಡು ಐದು ಮಂದಿಯನ್ನು ಬಂಧಿಸಿದ್ದರು. ನಿರಂತರ ವಿಚಾರಣೆಯ ಬಳಿಕ ಇಬ್ಬರು ಆರೋಪಿಗಳ ಕೃತ್ಯ ಸಾಬೀತಾಗಿದ್ದು ಅವರಿಗೆ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ನೀಡಿದೆ.