ಭೋಪಾಲ್,ಡಿ 22(MSP): ತುಂಬು ಗರ್ಭಿಣಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆದರೆ ಆತ್ಮಹತ್ಯೆ ಸಂದರ್ಭದಲ್ಲೇ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಕಾಟ್ನಿ ಪಟ್ಟಣದಲ್ಲಿ ನಡೆದಿದೆ. ಲಕ್ಷ್ಮಿ ಠಾಕೂರ್ (36) ಎಂಬಾಕೆ ಗುರುವಾರ ಮನೆಯ ಕೊಟ್ಟಿಗೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಪತಿ ಸಂತೋಷ್ , ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಜೀವ ಹೋಗುವ ಸಂದರ್ಭದಲ್ಲಿ ಲಕ್ಷ್ಮೀ ಗಂಡು ಮಗುವಿಗೆ ಜನ್ಮ ನೀಡಿದ್ದು ಮಗುವು ಕರುಳು ಬಳ್ಳಿಯೊಂದಿಗೆ ಇನ್ನೂ ಸಂಪರ್ಕ ಹೊಂದಿರುವುದು ತಿಳಿದುಬಂದಿದೆ. ತಕ್ಷಣವೇ ಪ್ರಸೂತಿ ತಜ್ಞೆಯನ್ನು ಸ್ಥಳಕ್ಕೆ ಕರೆಯಿಸಲಾಯಿತು. ಬಳಿಕ ಸ್ಥಳಕ್ಕೆ ಬಂದ ವೈದ್ಯರು ಮಗುವನ್ನು ತಾಯಿಯಿಂದ ಸುರಕ್ಷಿತವಾಗಿ ಬೇರ್ಪಡಿಸಿ ಆಸ್ಪತ್ರೆಗೆ ಕೊಂಡೊಯ್ಯುವಲ್ಲಿ ನೆರವಾದರು.
ಮಗು ಬದುಕುಳಿಯುವ ಎಲ್ಲ ಸಾಧ್ಯತೆ ಇದೆ ಎಂದು ಎಸ್ಐ ಕವಿತಾ ಸಹ್ನಿ ಹೇಳಿದ್ದಾರೆ. ಲಕ್ಷ್ಮಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪತಿ , ನನ್ನ ಹಾಗೂ ಲಕ್ಷ್ಮಿ ನಡುವೆ ಯಾವುದೇ ಮನಸ್ತಾಪ ಇರಲಿಲ್ಲ.ನಾವಿಬ್ಬರು ಬುಧವಾರ 9 ಗಂಟೆವರೆಗೂ ಟಿವಿ ನೋಡಿ ಮಲಗಲು ಹೋಗಿದ್ದೇವು. ಗುರುವಾರ ಬೆಳಗ್ಗೆ 6 ಗಂಟೆಗೆ ನಾನು ಎದ್ದಾಗ ಲಕ್ಷ್ಮಿ ಎಲ್ಲಿಯೂ ಕಾಣಿಸಲಿಲ್ಲ. ಆಕೆಯನ್ನು ಹುಡುಕುತ್ತಿದ್ದಾಗ ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ತಕ್ಷಣ ನಾನುಸ್ಥಳೀಯ ನಿವಾಸಿಗಳಿಗೆ ತಿಳಿಸಿದೆ ಎಂದು ಪತಿ ಸಂತೋಷ್ ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾರೆ.ಮಹಿಳೆ ನೇಣಿಗೆ ಶರಣಾಗುವ ಮೊದಲು ಅಥವಾ ನಂತರ ಮಗು ಜನಿಸಿರುವುದು ಇದು ಮೊದಲ ಪ್ರಕರಣ ಎಂದು ವೈದ್ಯಕೀಯ ಲೋಕದಲ್ಲಿ ಹೇಳಲಾಗುತ್ತಿದೆ..