ಸುಪ್ರೀತಾ ಸಾಲ್ಯಾನ್
ರಂಗವೇರಿ ಖಳ ನಾಯಕನ ಪಾತ್ರದಲ್ಲಿ ಅಬ್ಬರಿಸಿದರೆ ಪ್ರೇಕ್ಷಕರಲ್ಲಿ ಒಮ್ಮೆಗೆ ನಡುಕ ಹುಟ್ಟಿಸುವಂತಹ ಅದ್ಭುತವಾದ ನಟನೆ ಇವರದು. ಎಲ್ಲಾ ರೀತಿಯ ಪಾತ್ರಗಳನ್ನು ಸಲೀಸಾಗಿ ನಿರ್ವಹಿಸುವಂತಹ ಚಾತುರ್ಯ ಇವರಲ್ಲಿದೆ. ಅದರಲ್ಲೂ ಖಳ ನಾಯಕನ ಪಾತ್ರದಲ್ಲಿ ಮಿಂಚಿ ಕಲಾ ಜಗತ್ತನ್ನೇ ತನ್ನತ್ತ ಸೆಳೆದ ಖ್ಯಾತ ಕಲಾವಿದ. ಅಂದ ಹಾಗೆ ಇವರ ಹೆಸರು ಗೋಪಿನಾಥ್ ಭಟ್.
ವೃತ್ತಿಯಲ್ಲಿ ಇವರು ಬ್ಯಾಂಕ್ ಉದ್ಯೋಗಿ. ಆದರೂ ಮಾತೆ ಶಾರದೆಯಿಂದ ವರವಾಗಿ ಪಡೆದಿರುವ ಕಲಾ ಪ್ರತಿಭೆಯನ್ನು ಇಂದಿಗೂ ಉಸಿರಾಡುತ್ತಿದ್ದಾರೆ. ಮೂಲತಃ ಕಾಸರಗೋಡು ಸಮೀಪದ ಕುಂಬಳೆಯ ಶ್ರೀನಿವಾಸ್ ಭಟ್ ಮತ್ತು ಪದ್ಮ ಭಟ್ ದಂಪತಿಯ ಪುತ್ರನಾಗಿ ಜನಿಸಿದ ಇವರಿಗೆ ರಂಗಕಲೆಯ ಮೇಲೆ ಅಪಾರ ಪ್ರೀತಿ. ತಂದೆಯನ್ನೇ ಮಾದರಿಯಾಗಿಟ್ಟುಕೊಂಡು ರಂಗಭೂಮಿಯಲ್ಲಿ ಪಯಣ ಬೆಳೆಸಿದ ಇವರು ಉತ್ತಮ ಸಂಗೀತಗಾರ ಮತ್ತು ವಾಗ್ಮೀಯೂ ಹೌದು.
ರಂಗಭೂಮಿಯಲ್ಲಿ ಇವರು ಪ್ರಭುದ್ಧ ಕಲಾವಿದನಾಗಿ ಬೆಳೆಯಲು ಕಾರಣ ಗುರುಗಳಾದ ರಂಗಯೋಗಿ ರಮಾನಂದ ಚೂರ್ಯರು. ಇವರ ನೇತೃತ್ವದಿಂದ ಮುಖಕ್ಕೆ ಬಣ್ಣ ಹಚ್ಚಿದ ಈ ಪ್ರತಿಭೆ ಕನ್ನಡ, ಕೊಂಕಣಿ ಮತ್ತು ತುಳು ಭಾಷೆ ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ನಾಟಕಗಳಲ್ಲಿ ಮನಮೋಹಕವಾಗಿ ಪಾತ್ರ ನಿರ್ವಹಿಸಿದ್ದಾರೆ. ಮಾತ್ರವಲ್ಲ, ಗೋಪಿನಾಥ್ ಭಟ್ ಅವರು ಹೊರ ರಾಷ್ಟ್ರಗಳಲ್ಲೂ ವಿಶಿಷ್ಟ ಶೈಲಿಯಲ್ಲಿ ಪ್ರತಿಭೆಯನ್ನು ಪ್ರದರ್ಶಿಸಿ ಜನಮನ ಸೂರೆಗೊಂಡವರು.
ರಂಗಭೂಮಿಯಲ್ಲಿ ಇವರ ಪ್ರತಿಭಾ ಕೌಶಲ್ಯ ಎಷ್ಟಿತ್ತೆಂದರೆ ಬರೀ 21ನೇ ವಯಸ್ಸಿನಲ್ಲಿಯೇ ಸಿನಿಮಾ ರಂಗದ ಅವಕಾಶಗಳು ಇವರನ್ನು ಅರಸಿ ಬಂದಿತ್ತು. ಪ್ರಸಿದ್ಧ ಕಲಾವಿದ ಟಿ. ಎಸ್ ನಾಗಭರಣ ಅವರು ಎಳೆಯ ವಯಸ್ಸಿನಲ್ಲಿಯೇ ಇವರ ಪ್ರತಿಭೆಯನ್ನು ಗುರುತಿಸಿ ಜನುಮದಾತ ಎಂಬ ಕನ್ನಡ ಚಿತ್ರದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟರು. ವೀರ ಮದಕರಿ ಚಿತ್ರದಲ್ಲಿ ಮುಖ್ಯ ಖಳನಾಯಕನ ಪಾತ್ರದಲ್ಲಿ ಅತ್ಯಂತ ಆಕರ್ಷಕವಾಗಿ ಅಭಿನಯಿಸಿ ಎಲ್ಲರಿಂದಲೂ ಭೇಷ್ ಅನಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಎಸ್. ನಾರಯಣ್ ಅವರ ವೀರ ಪರಂಪರೆ ಚಿತ್ರದ ಖಳ ನಾಯಕನ ಪಾತ್ರಕ್ಕೆ ವಾಯ್ಸ್ ಡಬ್ ಕೂಡ ಮಾಡಿದ್ದಾರೆ. ಜೊತೆಗೆ ಬಣ್ಣ ಬಣ್ಣದ ಬದುಕು ಎಂಬ ಕನ್ನಡ ಚಿತ್ರದಲ್ಲಿಯೂ ನಟಿಸಿದ್ದಾರೆ.
ಕನ್ನಡದ ಅನೇಕ ಧಾರವಾಹಿಗಳಲ್ಲಿ ಛಾಪು ಮೂಡಿಸಿರುವ ಇವರು ಸುಮಾರು 5 ಕ್ಕೂ ಮಿಕ್ಕಿ ಧಾರವಾಹಿಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ರವಿ ಗರಣಿ ಅವರ ಕೃಷ್ಣ ರುಕ್ಮಿಣಿ, ತುಳಸಿ, ಜೀವನ್ಮುಖಿ, ಸಾವಿತ್ರಿ ಹೀಗೆ ಅನೇಕ ಧಾರವಾಹಿಗಳಲ್ಲಿ ನಟಿಸಿ ವಿಜೃಂಭಿಸಿದ್ದಾರೆ. ಅನೇಕ ಕಿರುಚಿತ್ರಗಳಲ್ಲಿಯೂ ನಟಿಸಿರುವ ಇವರಿಗೆ ಪದ್ಮಭೂಷನ್ ಬಿ. ವಿ ಕಾರಂತ್, ಜಯದೇವ್ ಹಟ್ಟಿಯಂಗಡಿ, ಸದಾನಂದ ಸುವರ್ಣ, ಮೋಹನ್ ಚಂದ್ರ ಮುಂತಾದ ಪ್ರಬುದ್ಧ ಕಲಾವಿದರೊಡನೆ ವೇದಿಕೆ ಹಂಚಿಕೊಂಡ ಹಿರಿಮೆಯೂ ಇದೆ.
ಇನ್ನೂ, ತುಳು ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಕಲಾ ತಪಸ್ವಿಗಳ ಪಟ್ಟಿಯಲ್ಲಿ ಗೋಪಿನಾಥ್ ಭಟ್ ಅವರು ಸೇರುತ್ತಾರೆ. ನಮ್ಮ ಕುಡ್ಲ, ರಂಗ್, ಚಂಡಿಕೋರಿ ಹೀಗೆ ಬೇರೆ ಬೇರೆ ಚಿತ್ರದಲ್ಲಿ ನಟಿಸಿರುವ ಇವರು ಕರಾವಳಿಯ ಹೆಮ್ಮೆಯ ಕಲಾವಿದ ಎನಿಸಿಕೊಂಡಿದ್ದಾರೆ.
ಇಂಪಾದ ಕಂಠಸಿರಿಯನ್ನು ಹೊಂದಿರುವ ಇವರು ಸಂಗೀತ ಪ್ರೇಮಿಯೂ ಹೌದು. ಗುರುಳಾದ ಕೆ. ಎಂ ದಾಸ್ ಅವರಿಂದ ಸಂಗೀತಭ್ಯಾಸ ಮಾಡಿರುವ ಇವರು ಸೊಗಸಾಗಿ ಹಾಡುವುದರಲ್ಲೂ ಪ್ರವೀಣರು. ಮಾತ್ರವಲ್ಲದೇ, ನಿರರ್ಗಳವಾಗಿ ಮಾತನಾಡುವ ವಾಕ್ ಚಾತುರ್ಯವನ್ನು ಹೊಂದಿರುವ ಇವರು ಕಲಾ ಜಗತ್ತಿಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಇವರ 30 ವರ್ಷಗಳ ಕಲಾಸೇವೆಗೆ ಜಿಲ್ಲಾ ಮತ್ತು ರಾಜ್ಯದಿಂದ ಗೌರವ ಪ್ರಶಸ್ತಿಗಳು ಇವರಿಗೆ ಸಂದಿವೆ.