ಮಂಗಳೂರು, ಡಿ 22 (MSP): ನಗರದ ಪಚ್ಚನಾಡಿ ಸೇತುವೆ ಸಮೀಪ ಶನಿವಾರ ಸಂಜೆ ನಗರ ಸಾರಿಗೆ ಖಾಸಗಿ ಬಸ್ಸೊಂದರ ಬ್ರೇಕ್ ಫೇಲ್ ಗೊಂಡು ಕಾರು, ಟೆಂಪೋ, ಬೈಕ್ ಗೆ ಡಿಕ್ಕಿಯಾಗಿ ನಡೆದ ಸರಣಿ ಅಪಘಾತದಲ್ಲಿ 13 ಮಂದಿ ಗಾಯಗೊಂಡಿದ್ದಾರೆ.
ಮಾರ್ಗ ಸಂಖ್ಯೆ 4ರ ಫಾತಿಮಾ ಹೆಸರಿನ ಖಾಸಗಿ ಬಸ್ ಪದವಿನಂಗಡಿಯಿಂದ ಪಚ್ಚನಾಡಿಗೆ ತೆರಳುತ್ತಿತ್ತು. ರೈಲ್ವೆ ಹಳಿಯ ಸಮೀಪ ಬ್ರೇಕ್ ವಿಫಲಗೊಂಡು ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ನಂತರ ಕಾರು, ಟೆಂಪೋ ಮತ್ತು ಬೈಕ್ಗೆ ಡಿಕ್ಕಿ ಹೊಡೆದಿದೆ.
ಜಯಂತ್, ಕೂಸಪ್ಪ, ಅಬ್ದುಲ್ ರೆಹಮಾನ್, ಮಾರ್ಷಲ್ ಮೆನೇಜಸ್, ಗ್ರೆಗೋರಿ, ಅಭಿನವ್, ಮುಕುಂದ ಭಟ್, ಮ್ಯಾಕ್ಸಿಲ್, ಪ್ರಜ್ವಲ್ ಫರ್ನಾಂಡಿಸ್, ಕರುಣಾಕರ ಶೆಟ್ಟಿ ಮತ್ತು ಮಹಾಲಿಂಗ ಎಂಬುವವರು ಗಾಯಗೊಂಡರು. ಪಚ್ಚನಾಡಿ ಸೇತುವೆ ಬಳಿ ಟೆಂಪೊ ಒಂದು ಕೆಟ್ಟು ನಿಂತಿತ್ತು. ಅದನ್ನು ಕೆಲವರು ತಳ್ಳುತ್ತಿದ್ದರು.
ಅದೇ ಸಮಯಕ್ಕೆ ಬ್ರೇಕ್ ಫೇಲ್ ಗೊಂಡ ಬಸ್ ಅವರತ್ತ ನುಗ್ಗಿದೆ. ಮೊದಲು ಕಾರಿಗೆ ಡಿಕ್ಕಿ ಹೊಡೆದ ಬಸ್, ನಂತರ ಟೆಂಪೊಗೆ ಗುದ್ದಿದೆ. ಟೆಂಪೊ ತಳ್ಳುತ್ತಿದ್ದ ಬಹುತೇಕರಿಗೆ ಗಾಯಗಳಾಗಿವೆ. ನಂತರ ಬೈಕೊಂದಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಜೆ 6.30ರ ಸುಮಾರಿಗೆ ಕತ್ತಲಾ ಗಿತ್ತು. ಘಟನೆ ನಡೆದ ತಕ್ಷಣವೇ ಸ್ಥಳೀಯ ನಿವಾಸಿ ಬಾಲಕೃಷ್ಣ ಮತ್ತಿತರರು ತಮ್ಮ ಕಾರಿನಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಬಹುತೇಕ ಗಾಯಾಳುಗಳು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ರಸ್ತೆಯ ಇಕ್ಕೆಲಗಳಲ್ಲಿ ಮನೆಗಳಿದ್ದು, ಭ್ರೇಕ್ ಫೇಲ್ ಆದ ಬಸ್ ನಿಧಾನಗತಿಯಲ್ಲಿ ಚಲಿಸಿದ ಪರಿನಾಮ ಭಾರೀ ಅನಾಹುತ ತಪ್ಪಿದೆ. ಒಂದು ವೇಳೆ ಮನೆಗಳಿಗೆ ಡಿಕ್ಕಿ ಹೊಡೆಯುತ್ತಿದ್ದರೆ ಅಥವಾ ಸೇತುವೆ ಸಮೀಪ ಚಲಿಸುತ್ತಿದ್ದರೆ ದೊಡ್ಡ ಅವಘಡವೇ ನಡೆಯುತ್ತಿತ್ತು