ಉಡುಪಿ, ನ 23(SM): ಪೇಜಾವರ ಸ್ವಾಮೀಜಿಗೆ ಅರಳುಮರಳು. ಅವರು ಕ್ಷಣಕೊಂದು ಮಾತನಾಡುತ್ತಾರೆ ಎಂದು ಚಿಂತಕ ಅಮಿನ್ ಮಟ್ಟು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಉಡುಪಿ ಅಂಬೇಡ್ಕರ್ ಯುವಸೇನೆಯ ವತಿಯಿಂದ ಭಾನುವಾರ ಬನ್ನಂಜೆ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಅಂಬೇಡ್ಕರ್ ಯುವಜನೋತ್ಸವವನ್ನು ಸೇನೆಯ ಲಾಂಛನ ಬಿಡುಗಡೆಗೊಳಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪೇಜಾವರ ಶ್ರೀಗಳ ಮಾತುಗಳನ್ನು ಬಹಳ ಗಂಭೀರ ವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಪೇಜಾವರ ಶ್ರೀಗಳು ರಾಮಮಂದಿರ ಕಟ್ಟುವ ಹೇಳಿಕೆಯನ್ನಾದರೂ ನೀಡಲಿ, ಸಂವಿಧಾನ ಬದಲಾವಣೆ ಹೇಳಿಕೆಯನ್ನಾದರೂ ನೀಡಲಿ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಆದರೆ, ದೇಶದ ಪ್ರಧಾನಿ ಅಥವಾ ಅವರ ಸಂಪುಟದ ಸಚಿವರು ಈ ರೀತಿ ಹೇಳಿಕೆ ನೀಡಿದರೆ ಅವರಿಗೆ ತಕ್ಕ ಉತ್ತರವನ್ನು ತಕ್ಕ ವೇದಿಕೆಯಲ್ಲಿ ನೀಡಬೇಕಾಗಿದೆ ಎಂದರು.
ಉಡುಪಿ ಚಲೋ ಮಾಡಿದಾಗ ಪೇಜಾವರ ಶ್ರೀಗಳ ಕೆಲವು ತಲೆಕೆಟ್ಟ ಶಿಷ್ಯರು ಉಡುಪಿಯನ್ನು ಶುಚಿಗೊಳಿಸುತ್ತೇವೆ ಎಂದಿದ್ದರು. ಇಂತಹ ಶಿಷ್ಯರನ್ನು ಇಟ್ಟುಕೊಂಡ ಗುರುಗಳು ಎಂಥವರಿರಬಹುದು ಎಂದು ತೀರ್ಮಾನ ಮಾಡಬೇಕಿದೆ. ದಲಿತರನ್ನು ನಿಂದನೆ ಮಾಡುವ ಸಚಿವರನ್ನು ಪ್ರಧಾನಿ ಮೋದಿ ಇನ್ನು ಕೂಡ ತನ್ನ ಸಂಪುಟದಲ್ಲಿ ಉಳಿಸಿಕೊಂಡಿದ್ದಾರೆ. ಇವರ ದಲಿತರ, ಅಂಬೇಡ್ಕರ ಮೇಲೆ ಇರುವ ಪ್ರೀತಿ ಹಾಗೂ ಸಂವಿಧಾನದ ಮೇಲಿನ ಗೌರವ ಏನು ಎಂಬುದು ಮುಂದಿನ ಚುನಾವಣೆಯಲ್ಲಿ ಉತ್ತರ ಕೊಡಬೇಕಾಗಿದೆ ಎಂದರು.
ಅಂಬೇಡ್ಕರ್ ಎನಿಸಿದ ಪ್ರಕಾರ ಸಂವಿಧಾನವನ್ನು ರಚಿಸಲು ಅವರಿಗೆ ಆಗಿಲ್ಲ. ಪ್ರಜಾಪ್ರಭುತ್ವ ಎಂಬ ಸೌಧದಲ್ಲಿ ದೇವರ ಬದಲು ದ್ವೆವಗಳು ಬಂದು ಸೇರಿಕೊಂಡರೆ ಅದನ್ನು ಸುಡಬೇಕಾಗುತ್ತದೆ. ಸಂವಿಧಾನ ವಿರೋಧಿಗಳು ಆ ಪ್ರಜಾಪ್ರಭುತ್ವದ ದೇಗುಲದ ಒಳಗೆ ನುಸುಳಿದರೆ ಆ ಸಂವಿಧಾನಕ್ಕೆ ಅರ್ಥ ಇಲ್ಲ. ಅದನ್ನು ಸುಡುತ್ತೇನೆ ಎಂದು ಅಂಬೇಡ್ಕರ್ ಹೇಳಿದ್ದರು. ಅಗತ್ಯ ಬಿದ್ದರೆ ಆ ಸಂವಿಧಾನವನ್ನು ಸುಡುವ ಅಧಿಕಾರ ನಮಗೆ ಮಾತ್ರ ಇರುವುದು. ದಲಿತ ವಿರೋಧಿ, ಅಂಬೇಡ್ಕರ್ ವಿರೋಧಿಗಳಿಗೆ ಆ ಅಧಿಕಾರ ಇಲ್ಲ ಎಂದರು.