ಉಡುಪಿ,ಆ.೩೧: ಇಂದಿನ ನಗರಸಭೆಯ ಚರ್ಚೆ ಅಕ್ಷರಶಃ ಮಾತಿನ ಸಮರವಾಗಿ ಪರಿವರ್ತನೆಯಾಯಿತು. ನಿನ್ನೆ ಬಿಜೆಪಿ ಕಾರ್ಯಕರ್ತರು ಜಿಲ್ಲೆಯಲ್ಲಿ ಸಿಆರ್ಝೆಡ್ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ಮರಳುಗಾರಿಕೆಗೆ ಅವಕಾಶ ನೀಡಬೇಕೆಂದು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಹಾಕಿದ್ದ ಪೆಂಡಾಲನ್ನು ನಗರ ಸಭೆಯಿಂದ ತೆರವುಗೊಳಿಸಲಾಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ಬಿಜೆಪಿ ಸದಸ್ಯರು ಇಂದು ಸಭೆ ಆರಂಭವಾಗುತ್ತಿದ್ದಂತೆ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಅವರು ವಿಷಯ ಮಂಡನೆ ಮಾಡುವುದಕ್ಕೂ ಅವಕಾಶ ನೀಡದೇ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.