ಕಾರ್ಕಳ ಅ 20: ಗೋ ಸಂಪತ್ತು ‘ಕೃಷಿ ಭಾರತ’ದ ಶಕ್ತಿ. ನಮ್ಮ ಪ್ರೀತಿ, ಗೌರವ, ಭಕ್ತಿ ಗೋಮಾತೆ ಜೊತೆ ಸದಾ ಇರಬೇಕು. ಅಮೃತ ಸಮಾನ ಹಾಲನ್ನು ನೀಡಿ ಮಾನವನಿಗೆ ಬದುಕು ನೀಡಿದ ತಾಯಿ ಎಲ್ಲ ಸುವಸ್ತುಗಳಿಗಿಂತಲೂ ಹೆಚ್ಚು ಶ್ರೇಷ್ಠ. ಸರ್ವ ಜೀವಿಗಳಲ್ಲಿಯೂ ದಯೆಯನ್ನು ಹೊಂದಿರಬೇಕು ಎಂದು ಭಾರತದ ಸಂಸ್ಕೃತಿ ಹೇಳುತ್ತದೆ. ಬದುಕಲು ಚಿಕ್ಕದೊಂದು ಅವಕಾಶ ನೀಡಿದರೆ ಮನುಷ್ಯನ ಬದುಕನ್ನೇ ಬದಲಿಸಬಲ್ಲ ಶಕ್ತಿ ಗೋವಿಗಿದೆ. ನಾವು ಎಲ್ಲರನ್ನೂ ಗೌರವಿಸುವ, ಎಲ್ಲರನ್ನೂ ಪ್ರೀತಿಸುವ ತತ್ವದಲ್ಲಿ ನಂಬಿಕೆ ಇರಿಸಿಕೊಂಡವರು. ಗೋವು ವ್ಯಾಪಾರದ ಸರಕಲ್ಲ- ಪ್ರೀತಿಯ ಸಂಕೇತ ಎಂದು ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ ಹೇಳಿದರು.
ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಅಕ್ಟೋಬರ್ 20 ರ ಶುಕ್ರವಾರ ಗೋ ಪೂಜೆಯಂದು ಕಾರ್ಕಳ ಬಂಡೀಮಠ ಬಸ್ಸ್ ನಿಲ್ದಾಣದ ಬಳಿ ಇರುವ ಪುರೋಹಿತ ಗೋಪಿನಾಥ ನರಸಿಂಹ ಪುರಾಣಿಕ್ ಅವರ ಗೋಶಾಲೆಯಲ್ಲಿ ಆಯೋಜಿಸಿದ ಗೋ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗೋ-ಸಂವರ್ದನೆಗೆ ಅನುಕೂಲ ಮತ್ತು ಅವಕಾಶಗಳಿರುವ ಆಸಕ್ತರಿಗೆ ನನ್ನ ಬೆಂಬಲ ಇದೆ. ವಿದ್ಯಾವಂತ ಯುವಕ ಯುವತಿಯರು ನಾಲ್ಕಾರು ಜನ ಜೊತೆಯಾಗಿ ಮುಂದೆ ಬರಬೇಕು. ಅವರಿಗೆ ಸರಕಾರದ ಪ್ರೋತ್ಸಾಹ ಧನ ಮತ್ತು ಟ್ರಸ್ಟ್ ವತಿಯಿಂದಲೂ ಮೂಲ ಧನ ನೆರವು ನೀಡಲಾಗುವುದು ಎಂದರು.
ಬದಲಾದ ಕಾಲಘಟ್ಟದಲ್ಲಿ ಗೋ ಸಂಪತ್ತು ಕರಗಿ ಕ್ಷೀಣಿಸುತ್ತಿದೆ. ಡೈರಿ ಹಾಲು, ರಾಸಾಯನಿಕ ಬೆರೆತ ಕ್ಷೀರೋತ್ಪನ್ನಗಳ ಬಳಕೆ ಸರಾಗವಾಗಿದೆ. ಗೋವನ್ನು ಮರೆತು ಅದರ ಪರಿಣಾಮ ಅನುಭವಿಸುತ್ತಿದ್ದೇವೆ. ಮನುಷ್ಯನ ಸರ್ವ ಆರೋಗ್ಯದ ಗುಟ್ಟು ಗೋ ಸಂಪತ್ತಿನೊಳಗಿದೆ. ಗೋವು ಎಲ್ಲ ಔಷದಗಳ ಭಂಡಾರವೂ ಹೌದು ಎಂದು ದೇವಾಡಿಗ ಸುಧಾರಕ ಸಂಘ ಕಾರ್ಕಳ ಇದರ ಮಾಜಿ ಅಧ್ಯಕ್ಷ ಲಕ್ಷ್ಮೀ ನಾರಾಯಣ ಕೆ. ಹೇಳಿದರು.ಮೂಡಬಿದ್ರೆ ಗೌರಿ ದೇವಸ್ಥಾನದ ಅರ್ಚಕ ರಾಜೇಶ್ ಭಟ್, ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಕೆ. ಪದ್ಮಾಕರ ಭಟ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.