ಉಡುಪಿ, ಡಿ 23(SM): ರೈತರು ದೇಶದ ಬೆನ್ನೆಲುಬು, ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪಕ್ಷಾತೀತವಾಗಿ ಪರಿಹರಿಸಲು ಎಲ್ಲಾ ಜನಪ್ರತಿನಿಧಿಗಳು ಪ್ರಯತ್ನಿಸಬೇಕು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಹೇಳಿದ್ದಾರೆ.
ಅವರು ಭಾನುವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳು ಹಾಗೂ ಕೃಷಿಕ ಸಮಾಜದ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ರೈತರ ದಿನಾಚರಣೆ ಮತ್ತು ರೈತ ಜನ ಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದರು. ರೈತರು ಮನೆ ನಿರ್ಮಾಣ, ತೋಟ ಅಭಿವೃದ್ಧಿ, ಬೇಲಿ ನಿರ್ಮಾಣ ಮುಂತಾದ ಅಭಿವೃದ್ದಿ ಕಾರ್ಯಕ್ರಮಗಳನ್ನು ಮಾಡಲು ರೂ.10 ಲಕ್ಷ ದ ವರೆಗೆ ಬಡ್ಡಿ ರಹಿತ ಸಾಲ ನೀಡುವ ಕುರಿತಂತೆ ಸರಕಾರದ ಮಟ್ಟದಲ್ಲಿ ಚರ್ಚಿಸಿ, ಜಾರಿಗೆ ಪ್ರಯತ್ನಿಸಲಾಗುವುದು ಎಂದರು.
ಜಾಗತೀಕರಣದ ನಂತರ ರೈತರ ಸಮಸ್ಯೆಗಳು ಹೆಚ್ಚಾಗಿದೆ. ರೈತರ ಸಮಸ್ಯೆಗಳನ್ನು ಪಕ್ಷಾತೀತವಾಗಿ ಕಂಡು ಅವುಗಳನ್ನು ಹಂತಹಂತವಾಗಿ ಬಗೆಹರಿಸಲು ಆದ್ಯತೆಯ ಮೇಲೆ ಪ್ರಯತ್ನಿಸಬೇಕು. ರೈತರ ಅಭಿವೃದ್ದಿಗೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಇವುಗಳನ್ನು ರೈತ ಸಂಘಟನೆಗಳ ಮುಖಂಡರು ಪ್ರತಿ ರೈತರಿಗೆ ತಲುಪಿಸಬೇಕು. ರೈತರ ಪರ ಹೆಚ್ಚು ಯೋಜನೆಗಳು ಜಾರಿಗೆ ಬರಬೇಕು, ಪ್ರಕೃತಿಯ ನಿಜವಾದ ರಕ್ಷಕರು ರೈತರು, ರೈತರು ನೀಡುವ ಸೇವೆಗೆ ಯಾವುದೇ ಬೆಲೆ ಕಟ್ಟಲು ಸಾದ್ಯವಿಲ್ಲ ಎಂದು ಡಾ. ಜಯಮಾಲಾ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಘುಪತಿ ಭಟ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಹಿಂದುಳಿದಿದೆ, ಇದು ಲಾಭದಾಯಕವಲ್ಲ ಎಂಬ ಭಾವನೆ ರೈತರಲ್ಲಿದೆ, ಜಿಲ್ಲೆಯ ರೈತರು ಎದುರಿಸುತ್ತಿರುವ ಕಾಡುಪ್ರಾಣಿ ಹಾವಳಿ, ವಾರಾಹಿ ನೀರಿನ ಯೋಜನೆ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸಬೇಕಿದೆ. ಕೃಷಿ ಮತ್ತು ರೈತಪರ ಯೋಜನೆಗಳನ್ನು ಜಿಲ್ಲೆಗೆ ರೂಪಿಸಬೇಕು ಎಂದು ಹೇಳಿದರು.