ಮಂಗಳೂರು, ಡಿ. 23(SM) : ತುಳು ಸಿನೆಮಾದ ಜೊತೆಗೆ ಒಡನಾಟ ಹೊಂದಿದ್ದ ಹಿನ್ನೆಲೆಯನ್ನು ಮುಂದಿಟ್ಟುಕೊಂಡು ಸುಧೀರ್ ಶ್ಯಾನುಭೋಗ್ ನಿರ್ಮಿಸಿರುವ ವಿಭಿನ್ನ ಕಥಾ ಹಂದರವುಳ್ಳ ಚಿತ್ರ `ಅನಂತು v/s ನುಸ್ರತ್' ತೆರೆಗೆ ಬರುತ್ತಿದ್ದು, ಚಿತ್ರದಲ್ಲಿ ಕಿರಿಯ ವಯಸ್ಸಿನ ಜಡ್ಜ್ ಮತ್ತು ಲಾಯರ್ ನಡುವಿನ ಪ್ರೇಮ್ ಕಹಾನಿಯನ್ನು ಕಟ್ಟಿಕೊಟ್ಟಿದ್ದಾರೆ.
ವಿನಯ್ ರಾಜ್ಕುಮಾರ್ ಅವರಿಗೆ ದೊಡ್ಡ ಬ್ರೇಕ್ ಕೊಡಬೇಕು, ಸದಭಿರುಚಿಯ ನವಿರಾದ ಕಥೆಯುಳ್ಳ ಚಿತ್ರವೊಂದು ಆಗಬೇಕು ಎಂಬುದು ರಾಜ್ ಕ್ಯಾಂಪ್ ಆಸೆಯಾಗಿತ್ತು. ಅದಕ್ಕಾಗಿ ಹಲವು ಸ್ಕ್ರಿಪ್ಟ್ಗಳ ಹುಡುಕಾಟ ನಡೆಸಿ ಕೊನೆಗೆ ಕೊನೆಗೆ ಸುಧೀರ್ ಶ್ಯಾನುಭೋಗ್ ಬರೆದ ಕಥೆ ಮನಸೆಳೆಯಿತು.
ಕಡಲತಡಿ ಮಂಗಳೂರು ಸಮೀಪ ಬಂಟ್ವಾಳದ ಎಸ್.ವಿ.ಎಸ್. ಶಾಲೆ ಹಳೇ ವಿದ್ಯಾರ್ಥಿ ಸುಧೀರ್ ಮೂಲತಃ ನೆಟ್ವರ್ಕ್ ಇಂಜಿನಿಯರ್. ಸಿನಿಮಾ ಆಸಕ್ತಿ ಬೇಗನೆ ಅದರೆಡೆ ಸೆಳೆಯುವಂತೆ ಮಾಡಿತು. ಟಿ.ವಿ. ಧಾರಾವಾಹಿಗಳು ಇವರಿಗೆ ಪ್ಲಾಟ್ ಫಾರ್ಮ್ ಒದಗಿಸಿದವು. ಇವರು ಬರೆದ ತುಳು ಸಿನಿಮಾ ಮದಿಪು ರಾಷ್ಟ್ರೀಯ ಪ್ರಶಸ್ತಿ ಬಂದದ್ದು ಇನ್ನಷ್ಟು ಹುಮ್ಮಸ್ಸು ನೀಡಿತ್ತು.
ಮಾಣಿಕ್ಯ ಪ್ರೊಡಕ್ಷನ್ ನಿರ್ಮಾಣದಲ್ಲಿ ಅನಂತು v/s ನುಸ್ರತ್ ಚಿತ್ರ ಕಥೆ ಬರೆದು ನಿರ್ದೇಶಿಸಲು ಸುಧೀರ್ಗೆ ಹೊಣೆಗಾರಿಕೆ ಸಿಕ್ಕಿದೆ. ಪ್ರೀತಿ ಮತ್ತು ಮಾನವೀಯ ಸಂಬಂದ ಗಳ ಜೊತೆಗೆ ಹಿಂದೂ ಮುಸ್ಲಿಂ ಸಾಮರಸ್ಯದ ಸಂದೇಶ ಕೊಡಲು ಇದೀಗ ಇವರು ಹೊರಟಿದ್ದಾರೆ.
ವಿನಯ್ ರಾಜ್ಕುಮಾರ್ ಅನಂತುವಾಗಿ, ಲತಾ ಹೆಗಡೆ ನುಸ್ರತ್ ಆಗಿ ಅಭಿನಯಿಸಿರುವ ಚಿತ್ರದಲ್ಲಿ ರವಿಶಂಕರ್, ಗುರುಪ್ರಸಾದ್, ಭಗವಾನ್ , ಕಾಮಿಡಿ ಕಿಲಾಡಿ ನಯನ, ನವೀನ್ ಡಿ. ಪಡೀಲ್ ಸಹಿತ ಪ್ರಮುಖರು ತಾರಾಗಣದಲ್ಲಿದ್ದಾರೆ.
ಡಿ. ೨೮ರಂದು ಶುಕ್ರವಾರ ಬಿಡುಗಡೆಯಾಗಲಿದೆ. ಅಭಿಷೇಕ್ ಕಾಸರಗೊಡು ಛಾಯಾಗ್ರಹಣವಿದ್ದು, ಸುನಾದ್ ಗೌತಮ್ ಸಂಗೀತ ಸಂಯೋಜಿಸಿದ್ದಾರೆ.