ಮಂಗಳೂರು, ಡಿ 24 (MSP): ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಿಸದೇ ಮೃತಪಟ್ಟ ಚಿಕ್ಕಮಗಳೂರು ಮೂಲದ ವ್ಯಕ್ತಿಯ ಮೃತದೇಹ ಹಸ್ತಾಂತರದಲ್ಲಿ ನಗರದ ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿ ಮತ್ತು ಮೃತನ ಸಂಬಂಧಿಕರ ನಡುವೆ ಡಿ ೨೩ರ ಭಾನುವಾರ ೪-೫ ತಾಸುಗಳ ಜಗಳ ನಡೆದು ಕೊನೆಗೆ ಪೊಲೀಸರ ಮದ್ಯಸ್ತಿಕೆಯಲ್ಲಿ ಶವ ಹಸ್ತಾಂತರ ಮಾಡಲಾಯಿತು.
ಶನಿವಾರ ಮುಂಜಾನೆ ಅಪಘಾತದಲ್ಲಿ ಗಾಯಗೊಂಡಿದ್ದ ಚಿಕ್ಕಮಗಳೂರಿನ ಪರಮೇಶ್ವರ ಎಂಬುವವರು ನಗರದ ಖಾಸಗಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿತ್ತು. ಭಾನುವಾರ ಮುಂಜಾನೆ ಅವರು ಮೃತಪಟ್ಟಿದ್ದರು. ಆದರೆ ಬಾಕಿ ಮೊತ್ತ 5,000 ಪಾವತಿ ಮಾಡಿ ಶವ ಪಡೆದುಕೊಳ್ಳುವಂತೆ ಆಸ್ಪತ್ರೆ ಮಂಡಳಿ ಸೂಚಿಸಿದೆ.
ಇದರಿಂದ ಸಿಟ್ಟಿಗೆದ್ದ ಮೃತನ ಸಂಬಂಧಿಕರು ‘ಬಾಕಿ ಮೊತ್ತ ಪಾವತಿಸುವ ಸಲುವಾಗಿ ಆಸ್ಪತ್ರೆಯ ಆಡಳಿತ ಮಂಡಳಿ ಶವವನ್ನು ಒತ್ತೆ ಇರಿಸಿಕೊಂಡಿದೆ’ ಎಂದು ಆರೋಪಿಸಿ ಕದ್ರಿ ಪೊಲೀಸ್ ಠಾಣೆಗೆ ದೂರನ್ನೂ ನೀಡಿದರು.
ಸಂಜೆ 6 ಗಂಟೆಯವರೆಗೂ ಮೃತನ ಸಂಬಂಧಿಕರು, ಆಸ್ಪತ್ರೆ ಆಡಳಿತ ಮತ್ತು ಪೊಲೀಸರ ನಡುವೆ ಜಟಾಪಟಿ ನಡೆಯಿತು. ಕೊನೆಗೂ ಒಮ್ಮತಕ್ಕೆ ಬಂದ ಬಳಿಕ ಮೃತದೇಹವನ್ನು ಪೊಲೀಸರ ಸುಪರ್ದಿಯಲ್ಲಿ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಆ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.