ಬೆಂಗಳೂರು,ಡಿ 24 (MSP): ಸಚಿವ ಸ್ಥಾನ ಕಳೆದುಕೊಂಡಿರುವ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಹೇಳಿರುವ ಆಡಿಯೋ ಕ್ಲಿಪ್ ವೊಂದು ವೈರಲ್ ಆಗಿದೆ. ಈ ದ್ವನಿ ಸಂಭಾಷಣೆಯಲ್ಲಿ ತಮ್ಮದೊಂದಿಗೆ ಯಾವ ಯಾವ ಶಾಸಕರು ಸೇರ್ಪಡೆಯಾಗಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅವರು ಅದರಲ್ಲಿ ಹೇಳಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ನನ್ನ ಹೇಳಿಕೆಗೆ ನಾನು ಬದ್ದನಾಗಿದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾಗಿದ್ದೇನೆ. ನಿನ್ನೆಯೂ ರಾಜೀನಾಮೆ ಹೇಳಿಕೆ ನೀಡಿದ್ದೆ. ನನ್ನ ಜತೆ ಎಷ್ಟು ಮಂದಿ ಶಾಸಕರಿದ್ದಾರೆ್ ಅನ್ನೋದನ್ನು ಈಗ ಹೇಳೋದಿಲ್ಲ. ಒಂದು ವಾರದ ಮಟ್ಟಿಗೆ ಕಾದು ನೋಡಿ, ಎರಡು ಮೂರು ದಿನಗಳಲ್ಲಿ ರಾಜೀನಾಮೆ ನೀಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ. ಆದರೆ ನಾನು ಬೇಕಾದರೆ ನಾಳೆಯೇ ರಾಜೀನಾಮೆ ನೀಡಬಹುದು ಎಂದು ತಿಳಿಸಿದ್ದರು.
ಇನ್ನೊಂದೆಡೆ ಇದೇ ವಿಚಾರವಾಗಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಮನಸ್ತಾಪಗಳಿದ್ದರೂ ಅದು ಸರಿಹೋಗುತ್ತದೆ. ನಾನು ಜಾರಕಿಹೊಳಿಗೆ ತೆರಳಿ ರಮೇಶ್ ಜೊತೆಗೆ ಮಾತುಕತೆ ನಡೆಸುತ್ತೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇನ್ನೊಂದೆಡೆ ಬೆಳಗಾವಿ, ಬಳ್ಳಾರಿ, ರಾಯಚೂರು ಜಿಲ್ಲೆಗಳ ಅತೃಪ್ತ ಶಾಸಕರೊಂದಿಗೆ ಬೆಂಗಳೂರಿನಲ್ಲಿಂದು ರಮೇಶ್ ಜಾರಕಿಹೊಳಿ ಮಾತುಕತೆ ನಡೆಸಲಿದ್ದು, ನಿರ್ಧಾರ ಕೈಗೊಳ್ಳಲು ಒತ್ತಡ ಹಾಕಲಿದ್ದಾರೆಎಂದು ಮೂಲಗಳಿಂದ ತಿಳಿದುಬಂದಿದೆ.