ಕಾಸರಗೋಡು, ಅ 21: ಕಾಞಂಗಾಡ್ ಹೊಸದುರ್ಗದಲ್ಲಿರುವ ಶ್ರೀ ಲಕ್ಷ್ಮೀ ವೆಂಕಟರಮಣ ಕ್ಷೇತ್ರದಲ್ಲಿ ಎರಡು ವಾರಗಳ ಹಿಂದೆ ಕಳವು ನಡೆಸಿದ ಬಾಗಲಕೋಟೆ ನಿವಾಸಿಯೋರ್ವನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬಾಗಲಕೋಟೆಯ ಬಸವರಾಜ್ (48) ಎಂದು ಗುರುತಿಸಲಾಗಿದೆ. ಈತನ ಸಹಚರ ತಲೆಮರೆಸಿಕೊಂಡಿದ್ದು, ಶೋಧ ಮುಂದುವರೆದಿದೆ.
ಕ್ಷೇತ್ರದೊಳಗೆ ಪ್ರವೇಶಿಸಿದ ಆರೋಪಿಗಳು ಕಾಣಿಕೆ ಹುಂಡಿಯನ್ನು ಕಳವು ನಡೆಸಿದ್ದು, 50 ಸಾವಿರ ರೂಪಾಯಿಗಿಂತ ಅಧಿಕ ಕಾಣಿಕೆ ಹಣ ಇದ್ದಿರಬಹುದು ಎಂದು ಕ್ಷೇತ್ರ ಪದಾಧಿಕಾರಿಗಳು ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದರು .
ಬಂಧಿತ ಬಸವರಾಜ್ ಬಳಿಯಿಂದ 2450 ರೂಪಾಯಿಗಳ ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನ ವಿರುದ್ದ ಇನ್ನೂ ಅನೇಕ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೆಲ ತಿಂಗಳ ಹಿಂದೆ ಕೆಲಸ ಹುಡುಕಿಕೊಂಡು ಬಾಗಲಕೋಟೆಯಿಂದ ಕಾಞಂಗಾಡ್ಗೆ ಬಂದಿದ್ದ. ರಸ್ತೆ ಕಾಮಗಾರಿ ಕೆಲಸಕ್ಕೆ ಸೇರಿಕೊಂಡ ಈತ ಬಳಿಕ ಕಳ್ಳತನಕ್ಕೆ ಕೈ ಹಾಕಿದ್ದು, ಎರಡು ವಾರಗಳ ಹಿಂದೆ ಹೊಸದುರ್ಗ ಕ್ಷೇತ್ರದಲ್ಲಿ ಕಳವು ನಡೆಸಿದ್ದ.
ಇದೀಗ ಪೊಲೀಸರು ಬಸವರಾಜ್ ನನ್ನು ಹೆಚ್ಚಿನ ವಿಚಾರಣೆಗ ಒಳಪಡಿಸಿದ್ದಾರೆ.