ಮಂಗಳೂರು,ಡಿ 24 (MSP): ಕ್ರಿಸ್ ಮಸ್ ಹಬ್ಬಕ್ಕೆ ಒಂದೇ ದಿನ ಬಾಕಿ ಇರುವಂತೆ ನಗರದಲ್ಲಿ ಹಬ್ಬದ ಸಂಭ್ರಮ ಕಳೆಕಟ್ಟಿದೆ. ಹಬ್ಬದ ಹಿನ್ನಲೆಯಲ್ಲಿ ಬೀದಿ ಬೀದಿಗಳಲ್ಲಿ ಕ್ರಿಸ್ ಮಸ್ ಶಾಪಿಂಗ್ ಜೋರಾಗಿದೆ.
ಅಲಂಕಾರಿಕ ವಸ್ತುಗಳಿರಬಹುದು ಅಥವಾ ಆಹಾರ ವಸ್ತುಗಳಿರಬಹುದು ಇತ್ತೀಚೆಗೆ ಇವುಗಳನ್ನು ಮನೆಯಲ್ಲೇ ತಯಾರಿ ಮಾಡುವ ಸಂಪ್ರದಾಯ ಕಡಿಮೆಯಾಗಿದ್ದು, ಇದನ್ನೇ ವ್ಯಾಪರಸ್ಥರು ಬಂಡವಾಳವನ್ನಾಗಿಸಿದ್ದಾರೆ. ಹೀಗಾಗಿ ಮಾರುಕಟ್ಟೆಗೆ ವಿವಿಧ ರೀತಿಯ ಅಲಂಕಾರಿಕ ಸಾಮಗ್ರಿಗಳು ಲಗ್ಗೆ ಇಟ್ಟಿದ್ದು, ನಗರದ ಅಂಗಡಿಗಳಲ್ಲಿ ಮಾರಾಟಕ್ಕಿಟ್ಟಿರುವ ನಕ್ಷತ್ರಗಳು, ಜಗಮಗಿಸುವ ಗೂಡುದೀಪಗಳು, ಕ್ರಿಬ್ಸ್ ಗೆ ಬೇಕಾದ ವಸ್ತುಗಳು, ಬೇಕರಿಗಳಲ್ಲಿ ಪ್ರದರ್ಶನಕ್ಕಿಟ್ಟಿರುವ ವಿವಿಧ ಆಕಾರದ ಕೇಕ್ ಗಳು ಹಾಗೂ ಬಗೆ-ಬಗೆಯ ತಿಂಡಿಗಳು ಯೇಸುವಿನ ಜನನದ ಆಗಮನವನ್ನು ಸಾರುತ್ತಿವೆ.
ಕ್ರಿಸ್ ಮಸ್ ಹಬ್ಬಕ್ಕಾಗಿಯೇ ಮಾರುಕಟ್ಟೆಗೆ ಬಣ್ಣ ಬಣ್ಣದ ನಕ್ಷತ್ರಗಳು, ರೆಡಿ ಮೇಡ್ ಗೋದಳಲಿಗಳು, ಬಾಲ ಏಸು, ಮೇರಿ, ಜೋಸೆಫ್, ದೇವದೂತರು, ನಾಗರಿಕರು,ಕುರಿಗಾಹಿಗಳು, ಕುರಿ, ವಿದ್ಯುತ್ ದೀಪ ಕೃತಕ ಕ್ರಿಸ್ ಮಸ್ ಟ್ರೀ , ಕರಾವಳಿ ಕ್ರೈಸ್ತರ ಕ್ರಿಸಿಮಸ್ ತಿನಿಸು ಕುಸ್ವಾರ್ ಇವುಗಳ ಮಾರಾಟ ಮತ್ತು ಖರೀದಿಯ ಭರಾಟೆ ಬಹಳ ಜೋರಾಗಿಯೇ ನಡೆಯುತ್ತಿದೆ.