ಬೆಳ್ತಂಗಡಿ,ಡಿ 25 (MSP): ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ ಆರೋಪಿಗೆ ಬೆಳ್ತಂಗಡಿ ನ್ಯಾಯಾಲಯ ಸೋಮವಾರ ಶಿಕ್ಷೆ ವಿಧಿಸಿದೆ.
ಬಂಟ್ವಾಳ ತಾಲೂಕು ಕುಳ ಗ್ರಾಮ ನಿವಾಸಿ ಸಯ್ಯದ್ ನಜೀಬ್ಗೆ ಬೆಳ್ತಂಗಡಿ ನ್ಯಾಯಾಲಯ ಐಪಿಸಿ 498(ಎ) ವರದಕ್ಷಿಣೆ ಹಿಂಸೆ ಪ್ರಕಾರ 2 ತಿಂಗಳು ಜೈಲು ಹಾಗೂ ಸಾವಿರ ರೂ.ದಂಡ, ವರದಕ್ಷಿಣೆ ನಿಷೇಧ ಕಾಯ್ದೆ-1961 ಕಲಂ 4ರ ಪ್ರಕಾರ 6 ತಿಂಗಳು ಶಿಕ್ಷೆ ಹಾಗೂ ಸಾವಿರ ರೂ.ಗಳ ದಂಡ ವಿಧಿಸಿದೆ. ದಂಡ ತೆರಲು ತಪ್ಪಿದಲ್ಲಿ ತಲಾ 15 ದಿನಗಳ ಹೆಚ್ಚುವರಿ ಜೈಲು ಶಿಕ್ಷೆ ಪ್ರಕಟಿಸಿದೆ.
ಬೆಳ್ತಂಗಡಿ ತಾಲೂಕು ಕರಾಯ ಗ್ರಾಮ ನಿವಾಸಿ ಮಹಿಳೆಯನ್ನು ಆರೋಪಿಯು 2015ರಲ್ಲಿ ವಿವಾಹವಾಗಿದ್ದನು. ಬಳಿಕ ಪತ್ನಿಗೆ ಹಿಂಸೆ ಸೇರಿದಂತೆ ವರದಕ್ಷಿಣೆಯ ಜತೆಗೆ ಚಿನ್ನಾಭರಣಕ್ಕಾಗಿ ಪೀಡಿಸುತ್ತಿದ್ದ ಎಂದು ಮಹಿಳೆ ಆರೋಪಿಯ ವಿರುದ್ಧ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.
ಪುತ್ತೂರು ಗ್ರಾಮಾಂತರದ ಅಂದಿನ ಸರ್ಕಲ್ ಇನ್ಸ್ಪೆಕ್ಟರ್ ಅನಿಲ್ ಎಸ್.ಕುಲಕರ್ಣಿ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಬೆಳ್ತಂಗಡಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಬಿ.ಕೆ.ಕೋಮಲ ಅವರು ಪ್ರಕರಣದ ವಿಚಾರಣೆ ನಡೆಸಿ ಆರೋಪಿಗೆ ಶಿಕ್ಷೆ ಪ್ರಕಟಿಸಿದ್ದಾರೆ. ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕ ಜಿ.ಕೆ.ಕಿರಣ್ಕುಮಾರ್ ಅವರು ವಾದಿಸಿದ್ದರು.