ಉಡುಪಿ,ಡಿ 25 (MSP):: ಪತ್ರಕರ್ತ ದಿನೇಶ್ ಪ್ರಗತಿಪರ ಚಿಂತಕ ಅಮೀನ್ ಮಟ್ಟು ಅವರು ಪೇಜಾವರ ಶ್ರೀಗಳ ಬಗ್ಗೆ ಹೀಯಾಳಿಸಿ ನೀಡಿದ ಹೇಳಿಕೆಯಿಂದ ಹಿಂದೂ ಸಮಾಜಕ್ಕೆ ನೋವು ಉಂಟಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಬೇಸರ ವ್ಯಕ್ತಪಡಿಸಿದ್ದಾರೆ.
ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು,ಪೇಜಾವರ ಶ್ರೀಗಳಿಗೆ ಅರಳು ಮರಳು ಎಂದು ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದು ಹಿಂದೂ ಧರ್ಮೀಯರಿಗೆಲ್ಲರಿಗೂ ನೋವುಂಟು ಮಾಡಿದೆ. ‘ಅಖಂಡ ಹಿಂದೂ ಧರ್ಮದ ಶ್ರೇಷ್ಠ ಸನ್ಯಾಸಿ, ದೀಕ್ಷೆ ಸ್ವೀಕರಿಸಿ 80 ವರ್ಷಗಳು ಪೂರೈಸುತ್ತಿರುವ ಈ ಸಂದರ್ಭದಲ್ಲಿ ಸ್ವತಃ ರಾಷ್ಟ್ರಪತಿಗಳೇ ಉಡುಪಿಗೆ ಬಂದು ಗೌರವಿಸುತ್ತಿದ್ದಾರೆ. ಇದು ದೇಶದ ಕಾರ್ಯಕ್ರಮವಾಗಿದೆ. ಇಂತಹ ಸಂದರ್ಭದಲ್ಲಿ ದಿನೇಶ್ ಅಮೀನ್ ಮಟ್ಟು ಅವರು ನೀಡಿರುವ ಹೇಳಿಕೆ ಯಿಂದ ಇಡೀ ಹಿಂದೂ ಧರ್ಮಕ್ಕೆ ನೋವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಬಹುಶಃ ಇಡೀ ದೇಶದ ಪೊಲೀಸ್ ವ್ಯವಸ್ಥೆಯನ್ನು 15 ನಿಮಿಷಗಳ ಕಾಲ ಸ್ಥಗಿತಗೊಳಿಸಿ, ಇಡೀ ಹಿಂದೂ ಧರ್ಮವನ್ನೇ ಮುಗಿಸುತ್ತೇನೆ ಎಂದ ಅಸಾದುದ್ದೀನ್ ಒವೈಸಿ ಅಂತಹವರು ದಿನೇಶ್ ಅಮೀನ್ ಮಟ್ಟು ಅವರಿಗೆ ಬಹಳ ದೊಡ್ಡ ವ್ಯಕ್ತಿಯಾಗಿರಬೇಕು.ಬಹುಶಃ ಅವರಿಗೆ ಆ ವ್ಯಕ್ತಿಯೇ ಶ್ರೇಷ್ಠರಂತೆ ಕಂಡಿರಬಹುದೇನೋ ಆದ್ದರಿಂದ ಈ ರೀತಿ ಮಾತನಾಡುತ್ತಿದ್ದಾರೆ’ ಎಂದು ಕೋಟ ಟೀಕಿಸಿದರು.