ಮಂಗಳೂರು,ಡಿ 25 (MSP): ಕರಾವಳಿಯ ಸಮಗ್ರ ಸಾಂಸ್ಕೃತಿಕ ಸೊಬಗನ್ನು ಬಿತ್ತರಿಸುವುದಕ್ಕೆ ವೇದಿಕೆಯಾಗಬೇಕಾಗಿದ್ದ ಕರಾವಳಿ ಉತ್ಸವ ಈ ಬಾರಿ ಋಣಾತ್ಮಕ ಕಾರಣಗಳಿಂದಲೇ ಸುದ್ದಿಯಾಗುತ್ತಿದೆ. ಅವ್ಯವಸ್ಥೆಯ ಅಗದಂತಿರುವ ಈ ಬಾರಿಯ ಕರಾವಳಿ ಉತ್ಸವವನ್ನು ದಕ್ಷಿಣಕನ್ನಡ ಜಿಲ್ಲಾಡಳಿತ ಕಾಟಚಾರಕ್ಕೆ ಆಯೋಜನೆ ಮಾಡುತ್ತಿದೆಯೇ ಎನ್ನುವ ಸಂಶಯ ಉತ್ಸವ ಪ್ರೀಯರನ್ನು ಕಾಡತೊಡಗಿದೆ.
ಉದ್ಘಾಟನೆಗೆ ಪ್ರತಿಭಟನೆಯ ಬಿಸಿ: ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಡಿ 21 ರ ಶುಕ್ರವಾರ ಕರಾವಳಿ ಉತ್ಸವದ ಉದ್ಘಾಟನಾ ಸಮಾರಂಭ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಎಂಆರ್ ಪಿಎಲ್ ವಿರೋಧಿ ಹೋರಾಟಗಾರರ ಪ್ರತಿಭಟನೆ ನಡೆಸಿ ಸುದ್ದಿಯಾಗಿತ್ತು. ಕರಾವಳಿ ಉತ್ಸವ ಉದ್ಘಾಟನೆ ಸಭಾ ಕಾರ್ಯಕ್ರಮ ನಡೆಯುತ್ತಿದ್ದ ಏಕಾಏಕಿ ಆಗಮಿಸಿದ ಎಂಆರ್ಪಿಎಲ್ ವಿಸ್ತರಣೆ ವಿರೋಧಿ ಹೋರಾಟಗಾರರು ವೇದಿಕೆ ಏರಿ ಪ್ರೇಕ್ಷಕರಿಗೆ ಮುಖ ಮಾಡಿ ನಿಂತು 'ಕರಾವಳಿ ಉಳಿಸಿ ಎಂಆರ್ಪಿಎಲ್ ವಿಸ್ತರಣೆ ನಿಲ್ಲಿಸಿ' ಎನ್ನುವ ಬ್ಯಾನರ್ ಪ್ರದರ್ಶಿಸಿದ್ದರು. ಈ ಸಂದರ್ಭ ವೇದಿಕೆಯಲ್ಲಿದ್ದಂತಹ ಸಚಿವ ಖಾದರ್, ಸಂಗೀತ ನಿರ್ದೇಶಕ ಗುರುಕಿರಣ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಏಕಾಏಕಿ ಪ್ರತಿಭಟನೆಯನ್ನು ಕಂಡು ಕಕ್ಕಾಬಿಕ್ಕಿಯಾಗಿದ್ದರು.
ಬಿಕೋ ಎನ್ನುತ್ತಿರುವ ವಸ್ತು ಪ್ರದರ್ಶನ: ಕರಾವಳಿ ಉತ್ಸವ ಮೈದಾನದಲ್ಲಿ ವಸ್ತು ಪ್ರದರ್ಶನವನ್ನು ಉದ್ಘಾಟನೆಯನ್ನು ಡಿ 21ರಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅದ್ದೂರಿಯಾಗಿಯೇ ನೆರವೇರಿಸಿದ್ರು. ಆದರೆ ಉದ್ಘಾಟನೆಯಾಗಿ ನಾಲ್ಕು ದಿನವಾದರೂ ವಸ್ತುಪ್ರದರ್ಶನದ ಮೈದಾನ ಮಾತ್ರ ಇನ್ನೂ ಬಿಕೋ ಎನ್ನುತ್ತಿದೆ. ಜಿಲ್ಲಾಡಳಿತಕ್ಕೆ ಉದ್ಘಾಟನೆಯಲ್ಲಿದ್ದ ಉತ್ಸಾಹ, ಶಿಸ್ತುಬದ್ದವಾದ ಆಯೋಜನೆಯಲ್ಲಿ ಮಾತ್ರಿರುವಂತೆ ಕಾಣುತ್ತಿಲ್ಲ. ಕಾರಣ ವಸ್ತುಪ್ರದರ್ಶನಕ್ಕೆ ವೇದಿಕೆಯಾಗಬೇಕಾಗಿದ್ದ ಮೈದಾನ ಸ್ಟಾಲ್ ಗಳಿಲ್ಲದೇ ಬಿಕೋ ಎನ್ನುತ್ತಿದೆ. ಉದ್ಘಾಟನೆಗೊಂಡು ನಾಲ್ಕು ದಿನ ಕಳೆದರೂ ಇನ್ನು ಸ್ಟಾಲ್ ಗಳನ್ನು ಜಿಲ್ಲಾಡಳಿತ ತಯಾರಿಯನ್ನು ಮಾಡಿಕೊಟ್ಟಿಲ್ಲ. ಸ್ಟಾಲ್ ಗಳಿಗೆ ಬೇಕಾದ ಸಾಮಾಗ್ರಿಗಳು ಇನ್ನೂ ಮೈದಾನದಲ್ಲಿ ಹಾಗೆಯೇ ಬಿದ್ದುಕೊಂಡಿದೆ. ಕರಾವಳಿ ಉತ್ಸವ ನೋಡಲೆಂದು ದೂರದೂರಿನಿಂದ ಪ್ರವಾಸಿಗರು, ಉತ್ಸವ ಪ್ರೇಮಿಗಳು ಆಗಮಿಸುತ್ತಿದ್ದು, ಇವರೆಲ್ಲರೂ ವಸ್ತುಪ್ರದರ್ಶನ ಮೈದಾನಕ್ಕೆ ಬಂದು ನಿರಾಸೆಯೊಂದಿಗೆ ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕುತ್ತಾ ನಿರ್ಗಮಿಸುತ್ತಿದ್ದಾರೆ.
ಕರೆಂಟ್ ಇಲ್ಲದ ಕಾಟಚಾರದ ಉತ್ಸವ: ಕರಾವಳಿ ಉತ್ಸವದ ಭಾಗವಾಗಿ ನಗರದ ಕದ್ರಿ ಪಾರ್ಕ್ ನಲ್ಲೂ ಸಂಜೆ 6 ರಿಂದ ರಾತ್ರಿ 9.15 ರವರೆಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಡಿ. 24 ರ ಕದ್ರಿ ಪಾರ್ಕ್ ನಲ್ಲಿ ಸಂಜೆ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭ ವಿದ್ಯುತ್ ಸ್ಥಗಿತಗೊಂಡಿತು. ಆದರೆ ವಿದ್ಯುತ್ ಕೈಕೊಟ್ಟಾಗ ಇದಕ್ಕೆ ಬೇಕಾದ ಬದಲಿ ವ್ಯವಸ್ಥೆಗಳನ್ನು ಮಾತ್ರ ಮಾಡಿರಲಿಲ್ಲ. ಹೀಗಾಗಿ ಕರೆಂಟ್ ಇಲ್ಲದೆ ಕಲಾವಿದರು ಕತ್ತಲಲ್ಲೇ ಪ್ರದರ್ಶನ ನೀಡಬೇಕಾಯಿತು. ಬಳಿಕ ಅಲ್ಲೇ ಇದ್ದ ಎರಡು ಬೈಕ್ ಗಳನ್ನು ಸ್ಟಾರ್ಟ್ ಮಾಡಿ ಅದರ ಹೆಡ್ ಲೈಟ್ ನ್ನು ವೇದಿಕೆಗೆ ಹರಿಸಿ ಕಾರ್ಯಕ್ರಮ ಮುಂದುವರಿಸಲಾಯಿತು. ಆದ್ರೆ ಇದು ಸಾಂಸ್ಕೃತಿಕ ಕಾರ್ಯಕ್ರಮವನ್ನು ಸವಿಯಲು ಬಂದ ಸಭಿಕರಿಗೆ ಕಿರಿಕಿರಿಯನ್ನು ಉಂಟುಮಾಡಿತು.
ಕಾರ್ಯಕ್ರಮಕ್ಕಾಗಿ ಜನರೇಟರ್ ಸೌಲಭ್ಯವು ಮಾಡಿದ್ದರೂ ಅದನ್ನು ಬಳಸಲು ಡೀಸೆಲ್ ವ್ಯವಸ್ಥೆ ಮಾಡಿರಲಿಲ್ಲ. ಕೊನೆಗೆ ವಿದ್ಯುಚ್ಛಕ್ತಿ, ದೀಪಗಳು ಮತ್ತು ಮೈಕ್ ವ್ಯವಸ್ಥೆ ಇಲ್ಲದೆ ಬೈಕ್ ನ ಹೆಡ್ ಲೈಟ್ ಸಹಾಯದಿಂದ ಕಾರ್ಯಕ್ರಮ ಮುಂದುವರಿಸಿದರು. ಸುಮಾರು ಅರ್ಧ ತಾಸಿನ ಬಳಿಕ ಕರೆಂಟ್ ಬಂದರೂ ಸಭಿಕರ ಕುರ್ಚಿ ಮಾತ್ರ ಖಾಲಿ ಹೊಡೆಯುತ್ತಿತ್ತು.