ಉಡುಪಿ, ಡಿ 25 (MSP): ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಸನ್ಯಾಸ ದೀಕ್ಷೆ ಸ್ವೀಕರಿಸಿ 80 ವರ್ಷ ತುಂಬುತ್ತಿರುವ ಹಿನ್ನೆಲೆ ಅವರ ಶಿಷ್ಯೆ, ಕೇಂದ್ರ ಸಚಿವೆ ಉಮಾಭಾರತಿ ಡಿ.27ರಂದು ಉಡುಪಿಯ ರಾಜಾಂಗಣದಲ್ಲಿ ಆಯೋಜಿಸಿರುವ ಗುರುವಂದನೆ ಕಾರ್ಯಕ್ರಮ ರದ್ದಾಗಿದೆ.
ಪೇಜಾವರ ಶ್ರೀಗಳ ಶಿಷ್ಯೆ ಕೇಂದ್ರ ಸಚಿವೆ ಉಮಾಭಾರತಿ ಗುರುವಂದನಾ ಕಾರ್ಯಕ್ರಮವನ್ನು ಉಡುಪಿಯಲ್ಲಿ ಹಮ್ಮಿಕೊಂಡಿದ್ದರು. ಈ ಅದ್ದೂರಿ ಗುರುವಂದನಾ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭಾಗವಹಿಸುವವರಿದ್ದರು. ಆದ್ರೆ ಶಿಷ್ಟಾಚಾರ ಪ್ರಕಾರ ರಾಷ್ಟ್ರಪತಿಗಳು ಸನ್ಮಾನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲದೆ ಇರುವುದು ಹಾಗೂ ಭದ್ರತಾ ಕಾರಣಗಳಿಂದಾಗಿ ಗುರುವಂದನೆ ಸಾರ್ವಜನಿಕ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಕಾರ್ಯಕ್ರಮ ರದ್ದಾದರೂ ರಾಷ್ಟ್ರಪತಿಗಳ ನಿಗದಿತ ಕಾರ್ಯಕ್ರಮದಂತೆರಾಮನಾಥ ಕೋವಿಂದ್ ಅವರು ಕೃಷ್ಣ ನಗರಿಗೆ ಭೇಟಿ ನೀಡಲಿದ್ದು ಡಿಸೆಂಬರ್ 27 ರ ಬೆಳಿಗ್ಗೆ 11.35ಕ್ಕೆ ಉಡುಪಿ ಹೆಲಿಪ್ಯಾಡ್ ಗೆ ಆಗಮಿಸಲಿದ್ದಾರೆ. ಬಳಿಕ ಪೇಜಾವರ ಶ್ರೀ ಹಾಗೂ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿಯವರನ್ನು ಭೇಟಿ ಮಾಡಲಿದ್ದಾರೆ. ನಂತರ 12.45ಕ್ಕೆ ಕೃಷ್ಣ ಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮಿಜಿಯವರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿ ನಿರ್ಗಮಿಸಲಿದ್ದಾರೆ. ರಾಷ್ಟ್ರಪತಿಗಳ ಆಗಮನದ ಹಿನ್ನಲೆಯಲ್ಲಿ ಸಾರ್ವಜನಿಕರು ಹಾಗೂ ಮಾಧ್ಯಮದವರಿಗೆ ಪೇಜಾವರ ಮಠ , ರಥ ಬೀದಿಗೆ ಪ್ರವೇಶ ನಿರ್ಭಂಧಿಸಲಾಗಿದೆ. ಹಾಗೂ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.