ನವದೆಹಲಿ,ಡಿ 25 (MSP): ಮೊಬೈಲ್ ಪ್ರೀ ಪೇಯ್ಡ್ ಸಿಮ್ ಗೆ ರೀ ಚಾರ್ಜ್ ಮಾಡಿ ಗಂಟೆಗಟ್ಟಲೆ ಹರಟುವುದನ್ನು ನಿಮಗೆ ಗೊತ್ತು ತಾನೆ..ಒಂದು ವೇಳೆ ಸಿಮ್ ನಲ್ಲಿದ್ದ ಕರೆನ್ಸಿ ಮುಗಿದುಹೋಯಿತು ಅಂದ್ರೆ ಮತ್ತೆ ರೀ ಚಾರ್ಚ್ ಮಾಡಬೇಕು..ಎಲ್ಲರಿಗೂ ಗೊತ್ತಿರುವ ವಿಚಾರ ಇಲ್ಲಿ ಯಾಕೆ ಉಲ್ಲೇಖ ಮಾಡಿದ್ದು ಅಂದರೆ ಇದೇ ವ್ಯವಸ್ಥೆ ಇನ್ಮುಂದೆ ನಮ್ಮ ವಿದ್ಯುತ್ ವ್ಯವಸ್ಥೆಗೂ ಬರಲಿದೆ. ಮನೆಯಲ್ಲಿ ದೀಪ ಬೆಳಗಬೇಕು ಪ್ಯಾನ್ ತಿರುಗಬೇಕು ಅಂದರೆ ನಿಮ್ಮ ವಿದ್ಯುತ್ ಖಾತೆಗೆ ಮೊದಲೇ ರೀಚಾರ್ಜ್ ಮಾಡಿಟ್ಟುಕೊಳ್ಳಬೇಕು. ವಿದ್ಯುತ್ ಬಳಕೆ ಮಾಡಿದಷ್ಟು ನಿಮ್ಮ ಖಾತೆಯಲ್ಲಿದ್ದ ವಿದ್ಯುತ್ ಕೂಡಾ ಕರಗುತ್ತಾ ಬರುತ್ತೆ.
ಹೌದು ಇಂತಹ ಯೋಜನೆಯೊಂದು 2019ರ ಏಪ್ರಿಲ್ 1ರಿಂದ ದೇಶಾದ್ಯಂತ ಜಾರಿಗೆ ಬರಲಿದೆ. ಸ್ಮಾರ್ಟ್ ಪ್ರೀಪೇಯ್ಡ್ ಮೀಟರುಗಳು ಇನ್ನುಮುಂದೆ ಜಾರಿಗೆ ಬರಲಿದ್ದು, ಹೇಗೆ ಮೊಬೈಲ್ ಪ್ರೀಪೇಯ್ಡ ಸಿಮ್ಗೆ ರೀಚಾರ್ಜ್ ಮಾಡುತ್ತೇವೋ ಅಂತೆಯೇ ಹೊಸದಾಗಿ ಜಾರಿಗೆ ಬರುವ ಸ್ಮಾರ್ಟ್ ಪ್ರೀಪೇಯ್ಡ್ ಮೀಟರ್ ಗಳಿಗೂ ರೀಚಾರ್ಜ್ ಮಾಡುವುದು ಅನಿವಾರ್ಯವಾಗುತ್ತದೆ.
ಈ ವ್ಯವಸ್ಥೆ ನೂತನ ವರ್ಷದ ಏಪ್ರಿಲ್ ಒಂದರಿಂದ ಜಾರಿಗೆ ಬರಲಿದ್ದು ಇದರಿಂದಾಗಿ ವಿದ್ಯುತ್ ಕಳ್ಳತನ ಕಡಿಮೆಯಾಗುತ್ತದೆ ಎಂದು ವಿದ್ಯುತ್ ಖಾತೆ ಸಹಾಯಕ ಸಚಿವ ಆರ್.ಕೆ.ಸಿಂಗ್ ಹೇಳಿದ್ದಾರೆ.
ಇನ್ನು ಸ್ಮಾರ್ಟ್ ಪ್ರೀಪೇಯ್ಡ ಮೀಟರು ಅಳವಡಿಕೆಯಿಂದ ನಿಗದಿತ ದಿನಾಂಕದೊಳಗೇ ವಿದ್ಯುತ್ ಬಿಲ್ಲ ಪಾವತಿ ಮಾಡಬೇಕು ಎನ್ನುವ ಸಮಸ್ಯೆ ನಿವಾರಣೆಯಾಗಲಿದೆ. ಅಲ್ಲದೆ ವಿದ್ಯುತ್ ಕಳ್ಳತನಕ್ಕೂ ಕಡಿವಾಣ ಬೀಳಲಿದೆ, ಜತೆಗೆ ವಿದ್ಯುತ್ ದುಂದುವೆಚ್ಚ , ಬೇಕಾಬಿಟ್ಟಿಯಾಗಿ ಬಳಸುವುದು ತಪ್ಪುತ್ತದೆ. ಬಡವರಿಗೆ ಒಂದೇ ಸಾರಿ ಬಿಲ್ ಪಾವತಿ ಮಾಡುವ ಹೊರೆಯೂ ಕಡಿಮೆಯಾಗಲಿದೆ.
ಆದರೆ ಸ್ಮಾರ್ಟ್ ಪ್ರೀಪೇಯ್ಡ ಮೀಟರ್ ಅಳವಡಿಕೆಯಿಂದ ಮೀಟರ್ ರೀಡರ್ಗೆ ಕೆಲಸವಿರುವುದಿಲ್ಲ. ಹೀಗಾಗಿ ಸಾವಿರಾರು ಮಂದಿ ಕೆಲಸ ಕಳೆದುಕೊಳ್ಳಬಹುದು. ಹೊಸ ವ್ಯವಸ್ಥೆಯಿಂದ ಅನಾನುಕೂಲತೆಗಿಂತ ಅನುಕೂಲತೆಗಳೇ ಹೆಚ್ಚು ಈ ವ್ಯವಸ್ಥೆಯಿಂದ ವಿದ್ಯುತ್ ವಿತರಣೆ ಕಂಪನಿಗಳಿಗೂ ಅನುಕೂಲವಾಗಲಿದ್ದು, ಮುಂಚಿತವಾಗಿಯೇ ಪಾವತಿ ಲಭ್ಯವಾಗುತ್ತದೆ. ಇದರಿಂದ ಕಂಪನಿಗಳು ಹೆಚ್ಚು ಬಂಡವಾಳವನ್ನು ಪಡೆಯುತ್ತವೆ ಎಂದು ಸಿಂಗ್ ಹೇಳಿದ್ದಾರೆ.