ಅಸ್ಸಾಂ,ಡಿ 25 (MSP): ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಕಟ್ಟಿರುವ ಏಷ್ಯಾದ ಎರಡನೇ ಅತಿ ಉದ್ದ ಹಾಗೂ ದೇಶದ ಅತ್ಯಂತ ಉದ್ದದ ರೈಲು ಮತ್ತು ರಸ್ತೆ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ದೇಶಕ್ಕೆ ಸಮರ್ಪಿಸಿದ್ದಾರೆ.
ಅಸ್ಸಾಂನಿಂದ ಅರುಣಾಚಲ ಪ್ರದೇಶದ ನೆಹರ್ ಲಗೂನ್ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಈ ಸೇತುವೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ನಿರ್ಮಿಸಲಾಗಿದೆ. ಈ ಬೃಹತ್ ಸೇತುವೆಗೆ 1997, ಜನವರಿ 22ರಂದು ಅಂದಿನ ಪ್ರಧಾನಿ ಎಚ್.ಡಿ. ದೇವೇಗೌಡರು ಶಂಕುಸ್ಥಾಪನೆ ಯನ್ನು ನೆರವೇರಿಸಿದ್ದರು. 5,900 ಕೋಟಿ ರುಪಾಯಿ ವೆಚ್ಚದ ಸೇತುವೆಯನ್ನು ಬಳಿಕ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ 2002ರಲ್ಲಿ ಕಾಮಗಾರಿ ಆರಂಭಿಸಿತು.
ಇದೀಗಾ 16 ವರ್ಷಗಳ ಕಾಮಗಾರಿ ನಂತರ 4.9 ಕಿ.ಮೀ ಉದ್ದದ ಸೇತುವೆ ಉದ್ಘಾಟನೆಗೊಂಡಿದ್ದು ಈ ಸೇತುವೆ 2 ಲೇನ್ಗಳ ರೈಲ್ವೇ ಟ್ರ್ಯಾಕ್ ಮತ್ತು 3 ಲೇನ್ಗಳು ರಸ್ತೆ ಒಳಗೊಂಡಿದೆ.ಅಧುನಿಕ ತಂತ್ರಜ್ಞಾನಗಳನ್ನು ಬಳಸಿ ನಿರ್ಮಿಸಲಾದ ಈ ಬೋಗಿಬೀಲ್ ಸೇತುವೆ ತುರ್ತು ಸಂದರ್ಭದಲ್ಲಿ ಯುದ್ಧ ವಿಮಾನವನ್ನು ಕೂಡ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡುವಷ್ಟು ಸುಭದ್ರವಾಗಿದೆ. ಪೂರ್ಣವಾಗಿ ವೆಲ್ಡಿಂಗ್ ಮೂಲಕ ನಿರ್ಮಿಸಿದ ದೇಶದ ಏಕೈಕ ಹಾಗೂ ಮೊದಲ ಸೇತುವೆ ಇದಾಗಿದೆ.