ಉಡುಪಿ,ಡಿ 26 (MSP):ಅಯೋದ್ಯೆ ಶ್ರೀರಾಮ ಮಂದಿರ ಸಾವಿರ ವರ್ಷದ ಪರಂಪರೆಯ ಪ್ರತೀಕ ಎಂದು ವಿಶ್ವ ಹಿಂದು ಪರಿಷದ್ ದಕ್ಷಿಣ ಕ್ಷೇತ್ರದ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಹೇಳಿದರು.
ವಿಶ್ವಹಿಂದು ಪರಿಷದ್ ವತಿಯಿಂದ ಮಂಗಳವಾರ ಕಡಿಯಾಳಿ ಕಾತ್ಯಾಯಿನಿ ಮಂಟಪದಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ರಾಮತಾರಕ ಮಂತ್ರ ಜಪಪಠಣ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರಾಮ ಮಂದಿರ ನಿರ್ಮಾಣ ಎನ್ನುವುದು ರಾಷ್ಟ್ರ ಸ್ವಾಭಿಮಾನದ ಪುನರ್ನಿರ್ಮಾಣದ ಆಶಯವಾಗಿದೆ. ದೇಶದ ಕೋಟ್ಯಾಂತರ ಜನರ ಶ್ರದ್ಧೆ ಎಂದರು. ರಾಮ ಮಂದಿರ ಮಾತ್ರವಲ್ಲದೆ ಮಥುರ ಶ್ರೀಕೃಷ್ಣ ಜನ್ಮಸ್ಥಳ, ಕಾಶಿ ವಿಶ್ವನಾಥ ಮಂದಿರ ಹಿಂದುಗಳ ಕನಸಾಗಿದೆ ಎಂದು ಅಭಿಪ್ರಾಯಪಟ್ಟರು. ಧಾರ್ಮಿಕ ಅನುಷ್ಠಾನಗಳ ಮೂಲಕ ರಾಮಮಂದಿರ ನಿರ್ಮಾಣದ ಶ್ರೇಯಸ್ಸಿಗಾಗಿ ನಾವೆಲ್ಲರು ಪ್ರಾರ್ಥಿಸೋಣ ಎಂದು ಕರೆ ನೀಡಿದರು. ಸಾಹಿತಿ, ಚಿಂತಕ ವೇದ ಬ್ರಹ್ಮಶ್ರೀ ಸೂರಾಲು ದೇವಿ ಪ್ರಸಾದ್ ತಂತ್ರಿ ಮಾತನಾಡಿ, ರಾಮ ಎಂದು ತಾನು ದೇವರು ಎಂದು ಹೇಳಿಕೊಂಡಿಲ್ಲ. ತನ್ನ ಚಾರಿತ್ರ್ಯದಿಂದ ದೇವರಾಗಿದ್ದಾನೆ. ತಮ್ಮ ಸನಾತನ ಪರಂಪರೆ ರಾಮನ ಆದರ್ಶಗಳನ್ನು ಕಂಡು ದೇವರು ಎಂದು ಬಣ್ಣಿಸಿದೆ. ಇಂಥ ಧಾರ್ಮಿಕ ಅನುಷ್ಠಾನಗಳ ಮೂಲಕ ರಾಮ ಮಂದಿರ ಸಂಕಲ್ಪ ಮತ್ತಷ್ಟು ಗಟ್ಟಿಗೊಂಡು, ಜನರು ಸಂಘಟಿತರಾಗುವಂತಾಗಲಿ ಎಂದು ಹಾರೈಸಿದರು.
ವಿಶ್ವಹಿಂದು ಪರಿಷತ್ ಮುಖಂಡರಾದ ನಾರಯಣ ಮಣಿಯಾಣಿ, ಸುಪ್ರಭ ಆಚಾರ್ಯ, ಶರಣ್ಪಂಪ್ವೆಲ್ ಮತ್ತು ಬಜರಂಗದಳ ಮುಖಂಡರಾದ ಸುನಿಲ್.ಕೆ.ಆರ್, ದಿನೇಶ್ ಮೆಂಡನ್ ಉಪಸ್ಥಿತರಿದ್ದರು. ಜಯಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಬೆಳಗ್ಗೆ ರಾಮದೇವರ ಪ್ರತಿಷ್ಠೆ ನಡೆದು, ಗಣಹೋಮ ಸಂಪನ್ನಗೊಂಡಿತು. ಬೆಳಗ್ಗೆಯಿಂದ ಮಧ್ಯಾಹ್ನ ವರೆಗೆ ಹನುಮಾನ್ ಚಾಲೀಸ್ ಪಠಣ, ಶ್ರೀರಾಮ ಸಂಕೀರ್ತನೆ ನಡೆಯಿತು.