ಮಂಗಳೂರು, ಅ 21: ಪಾಲಿಕೆ ವ್ಯಾಪ್ತಿಯ ಡಾನ್ ಬೋಸ್ಕೋ ಹಾಲ್ ಮುಂಭಾಗಲ್ಲಿರುವ ಮ್ಯಾನ್ಹೋಲನ್ನು ದುರಸ್ತಿಮಾಡಲು ಪೌರ ಕಾರ್ಮಿಕರನ್ನು ಅಮಾನವೀಯ ರೀತಿಯಲ್ಲಿ ದುಡಿಸಿದ ಘಟನೆ ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದೆರಡು ದಿನಗಳ ಹಿಂದೆ ಮಂಗಳೂರಿನ ಬಂದರು ವಾರ್ಡಿನಲ್ಲಿಯೂ ಪೌರಕಾರ್ಮಿಕರು ಯಾವುದೇ ಕೈಗವಸುಗಳನ್ನು ಮತ್ತು ಕಾಲು ಚೀಲಗಳನ್ನುಹಾಕಿಕೊಳ್ಳದೇ ಮಲತ್ಯಾಜ್ಯ ಚರಂಡಿಯನ್ನು ಸ್ವಚ್ಛಗೊಳಿಸಿದ್ದರು. ಇದರ ಬೆನ್ನಲ್ಲೇ ಮತ್ತೊಮ್ಮೆ ಈ ಘಟನೆ ನಡೆದಿರೋದು ಆಕ್ರೋಶಕ್ಕೆ ಕಾರಣವಾಗಿದೆ.
ಪೌರ ಕಾರ್ಮಿಕರು ಮಲತ್ಯಾಜ್ಯ ಚರಂಡಿಯನ್ನು ದುರಸ್ತಿ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿವೆ. ಇದಕ್ಕೆ ಪಾಲಿಕೆಯ ನಿರ್ಲಕ್ಷ್ಯವೇ ಕಾರಣವೆನ್ನಲಾಗಿದೆ. ಸ್ಥಳೀಯ ಕಾರ್ಪೋರೇಟರ್ ಎ.ಸಿ ವಿನಯರಾಜ್ ಅವರಿಗೆ ಸಂಬಂಧಿಸಿದ ವಾರ್ಡ್ ಇದಾಗಿದ್ದು, ಪೌರ ಕಾರ್ಮಿಕರನ್ನು ಈ ರೀತಿ ದುಡಿಸಿಕೊಳ್ಳುತ್ತಿರುವ ಬಗ್ಗೆ ಸಿಪಿಐಎಂ ಗರಂ ಆಗಿದೆ.
ಡ್ರೈನೇಜ್ ಗುಂಡಿಗೆ ಕಾರ್ಮಿಕರನ್ನು ಇಳಿಸಿ ಅಮಾನವೀಯ ಕೃತ್ಯ ನಡೆಸಿರುವ ಹಿನ್ನೆಲೆ ಮಂಗಳೂರು ಮಹಾನಗರ ಪಾಲಿಕೆ ಎದುರು ಸಿಪಿಐಎಂ ಬೃಹತ್ ಪ್ರತಿಭಟನೆ ನಡೆಸಿತು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರತಿಭಟನೆಯಲ್ಲಿ ಆಗ್ರಹಿಸಿದರು.