ಬಳ್ಳಾರಿ,ಡಿ 25 (MSP): ಚಿರತೆ ದಾಳಿಗೆ ಕಂಪ್ಲಿ ತಾಲೂಕಿನ ದೇವಲಾಪುರ ಗ್ರಾಮದ ಕರಿಗುಡ್ಡ ಪ್ರದೇಶದಲ್ಲಿ ಮಂಗಳವಾರ ಬಾಲಕಿಯೊಬ್ಬಳು ಮೃತಪಟ್ಟಿದ್ದು, 15 ದಿನಗಳಲ್ಲಿ ಚಿರತೆ ದಾಳಿಗೆ ತಾಲೂಕಿನಲ್ಲಿ ಇಬ್ಬರು ಬಲಿಯಾದಂತಾಗಿದೆ.ಗ್ರಾಮದ ಕಾರಿಗನೂರು ಪಂಪಾಪತಿ – ವನಜಾಕ್ಷಿ ದಂಪತಿಯ ಎರಡನೇ ಮಗಳು ಜಯಸುಧಾ (9) ಮೃತಪಟ್ಟ ಬಾಲಕಿ.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದ ಜಯಸುಧಾಗೆ, ಕ್ರಿಸ್ಮಸ್ ನಿಮಿತ್ತ ಮಂಗಳವಾರ ಶಾಲೆಗೆ ರಜೆ ಇತ್ತು.
ಹೀಗಾಗಿ ಮುಂಜಾನೆ ಆಕೆಯೂ ತಾಯಿಯೊಂದಿಗೆ ಹೊಲಕ್ಕೆ ಹೋಗಿದ್ದಳು. ತಾಯಿ ಹತ್ತಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿಯೇ ಇದ್ದ ಬಾಲಕಿ ಹತ್ತಿ ಬಿಡಿಸುವುದರಲ್ಲಿ ತಲ್ಲಿನಳಾಗಿದ್ದಳು. ಈ ಸಂದರ್ಭ ದಾಳಿ ಮಾಡಿದ ಚಿರತೆ, ಕತ್ತು ಹಿಡಿದು ಹೊತ್ತೊಯ್ದಿದೆ. ಅದನ್ನು ನೋಡಿದ ವನಜಾಕ್ಷಿ ಕಿರುಚಾಡಿದ್ದಾರೆ. ರೈತರು, ಕೃಷಿ ಕೂಲಿ ಕಾರ್ಮಿಕರು ಧಾವಿಸಿ, ಚಿರತೆ ಮೇಲೆ ಕಲ್ಲು ಎಸೆದಿದ್ದಾರೆ. ಹೆದರಿದ ಚಿರತೆ ಬಾಲಕಿಯನ್ನು ಅಲ್ಲಿಯೇ ಬಿಟ್ಟು ಹೋಗಿದೆ.
ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ತರಲಾಯಿತು. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಬಾಲಕಿ ಅಸುನೀಗಿದ್ದಾಳೆ.
ಡಿ.11ರಂದು ಮೊದಲ ಬಲಿ
ದೇವಲಾಪುರ ಹ್ರಾ.ಪಂ ವ್ಯಾಪ್ತಿಯ ಸಮೀಪದ ಸೋಮಪುರದಲ್ಲಿ.ಡಿ 11 ರಂದು ತನ್ನ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕ ವೆಂಕಟಸ್ವಾಮಿ(3) ಯ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು.