ಮಂಗಳೂರು,ಡಿ 26 (MSP): ಕರಾವಳಿ ಉತ್ಸವದ ಅಂಗವಾಗಿ ಸೋಮವಾರ ಕರಾವಳಿ ಉತ್ಸವ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ವಿದ್ಯುತ್ ಕೈಕೊಟ್ಟರೆ ಮಂಗಳವಾರ ಸಂಜೆ ಮತ್ತೆ ಕದ್ರಿ ಪಾರ್ಕ್ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಮಂಗಳವಾರ ಧ್ವನಿವರ್ಧಕಗಳು ಕಾರ್ಯನಿರ್ವಹಿಸದೇ ಪ್ರೇಕ್ಷಕರು ಹಿಡಿಶಾಪ ಹಾಕುವಂತಾಯಿತು.
ವಿದ್ವಾನ್ ಎಸ್. ಶಂಕರ್ ಅವರು ಸುಮಾರು 40 ನಿಮಿಷಗಳ ಕಾಲ ಧ್ವನಿವರ್ಧಕ ಇಲ್ಲದೆಯೇ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡಬೇಕಾಯಿತು. ಸೋಮವಾರ ಕರಾವಳಿ ಉತ್ಸವ ಮೈದಾನದಲ್ಲಿ ವಿದ್ಯುತ್ ಸ್ಥಗಿತಗೊಂಡಿದ್ದರಿಂದ ಸುಮಾರು ಮುಕ್ಕಾಲು ಗಂಟೆ ಕತ್ತಲಲ್ಲಿಯೇ ಕಾರ್ಯಕ್ರಮಗಳನ್ನು ನಡೆಸಬೇಕಾಯಿತು. ಬೈಕ್ಗಳ ಹೆಡ್ ಲೈಟ್ಗಳನ್ನು ವೇದಿಕೆಗೆ ಬೀಳುವಂತೆ ವ್ಯವಸ್ಥೆ ಕಲ್ಪಿಸಿ ಕಾರ್ಯಕ್ರಮ ಮುಂದುವರೆಸಲಾಯಿತು. ಮತ್ತೆ ಮಂಗಳವಾರವೂ ಕರಾವಳಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಮಸ್ಯೆ ಉಂಟಾಗಿರುವುದರಿಂದ ರಜಾದಿನದ ಖುಷಿಗಾಗಿ ಕಾರ್ಯಕ್ರಮ ವೀಕ್ಷಿಸಲು ಬಂದ ಪ್ರೇಕ್ಷಕರಿಗೆ ಬಹಳ ನಿರಾಸೆ ಆಯಿತು.
ವೇದಿಕೆ ಮೇಲೇರಿ ಕುಳಿತ ಕಲಾಸ್ತಕರು
ಕಾರ್ಯಕ್ರಮದ ಆಯೋಜಕರು ಧ್ವನಿವರ್ಧಕವನ್ನು ಸರಿಪಡಿಸುವುದಕ್ಕೆ ಎಷ್ಟೇ ಪ್ರಯತ್ನ ಪಟ್ಟರೂ ತತ್ಕ್ಷಣಕ್ಕೆ ಅದು ಸರಿ ಆಗಲಿಲ್ಲ. ವಿದ್ವಾನ್ ಎಸ್ ಶಂಕರ್ ಅವರ ಕರ್ನಾಟಿಕ್ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಮೈಕ್ ಕೈಕೊಟ್ಟಿತ್ತು. ಇದರಿಂದಾಗಿ ಸೇರಿದ್ದ ಪ್ರೇಕ್ಷಕರಿಗೆ ನಿರಾಸೆ ಉಂಟಾಯಿತು. ಅದರೂ, ವೇದಿಕೆಯಲ್ಲಿದ್ದ ಸಂಗೀತ ಕಲಾವಿದರು, ಧ್ವನಿವರ್ಧಕದ ಸಹಾಯವಿಲ್ಲದೆ, ಹಾಡುಗಾರಿಕೆಯನ್ನು ಮುಂದುವರಿಸಿದರು. ಇತ್ತ ಮೈಕ್ ನ ಕೊರತೆಯಿಂದ ಹಾಡುಗಾರಿಕೆ ಕೇಳಿಸುತ್ತಿರಲಿಲ್ಲ. ಕೊನೆಗೆ ಕೆಲವು ಕಲಾಸಕ್ತರು ವೇದಿಕೆಯ ಮೇಲೆಯೇ ಒಂದು ಬದಿಯಲ್ಲಿ ಬಂದು ಕುಳಿತುಕೊಂಡು ಸಂಗೀತ ಕೇಳುತ್ತಿದ್ದರು.