ಉಡುಪಿ, ಡಿ 26 (MSP): ದೇಶದ ಪ್ರಥಮ ಪ್ರಜೆ ಉಡುಪಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ತಯಾರಿ ಹಂತಿಮ ಹಂತದಲ್ಲಿದೆ. ಶ್ರೀಕೃಷ್ಣಮಠ, ಪೇಜಾವರ ಮಠಕ್ಕೆ ಡಿ.27 ರಂದು ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ.
ಆದಿ ಉಡುಪಿ ಹೆಲಿಪ್ಯಾಡ್ನಿಂದ ವಿಶೇಷ ವಾಹನದಲ್ಲಿ ಬನ್ನಂಜೆಯಲ್ಲಿರುವ ಸರ್ಕ್ಯುಟ್ ಹೌಸ್ಗೆ ಆಗಮಿಸಿ, ಅಲ್ಲಿಂದ ಶ್ರೀಕೃಷ್ಣಮಠಕ್ಕೆ ತೆರಳಿ ಶ್ರೀಕೃಷ್ಣ ದರ್ಶನ ಪಡೆದು, ಬಳಿಕ ಪೇಜಾವರ ಮಠಕ್ಕೆ ತೆರಳಲಿದ್ದಾರೆ. ರಾಷ್ಟ್ರಪತಿಗಳ ಆಗಮನ ಹಿನ್ನೆಲೆಯಲ್ಲಿ ಬನ್ನಂಜೆ ಸರ್ಕ್ಯುಟ್ ಹೌಸ್ಗೆ ಪೈಂಟಿಂಗ್ ಮಾಡಲಾಗಿದ್ದು, ಸಣ್ಣಪುಟ್ಟ ದುರಸ್ಥಿ ಕಾರ್ಯ ಮುಗಿಸಲಾಗಿದೆ. ಸರ್ಕ್ಯುಟ್ ಹೌಸ್ ಆವರಣವನ್ನು ಒಂದು ಕಸ, ಕಡ್ಡಿ ಇಲ್ಲದಂತೆ ಶುಚಿಗೊಳಿಸಲಾಗಿದೆ. ಕಳೆದ ವರ್ಷ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಬೇಟಿ ನೀಡಿದ ವೇಳೆ ಲಕ್ಷಾಂತರ ರೂ ವ್ಯಯಿಸಿ ನವೀಕರಿಸಲಾಗಿದ್ದ ಕೊಠಡಿಗಳನ್ನು ಎರಡನೇ ಬಾರಿ ಬೇಟಿ ನೀಡುತ್ತಿರುವ ರಾಮ್ನಾಥ್ ಕೋವಿಂದ್ ಅವರು ವಿಶ್ರಾಂತಿಗೆ ಬಳಸುವುದು ವಿಶೇಷವಾಗಿದೆ. ಇನ್ನೊಂದು ಮೂಲದ ಪ್ರಕಾರ ರಾಷ್ಟ್ರಪತಿಗಳು ಆದಿ ಉಡುಪಿ ಹೆಲಿಪ್ಯಾಡ್ನಿಂದ ನೇರವಾಗಿ ಮಠಕ್ಕೆ ಬೇಟಿ ನೀಡಲಿದ್ದಾರೆ. ಸರ್ಕ್ಯುಟ್ ಹೌಸ್ನಲ್ಲಿ ವಿಶ್ರಮಿಸುವುದಿಲ್ಲ ಎನ್ನಲಾಗುತ್ತಿದೆ. ಆದರೂ ಸರ್ಕ್ಯುಟ್ಹೌಸ್ ರಾಷ್ಟ್ರಪತಿಗಳ ಸ್ವಾಗತಕ್ಕೆ ಜಗಮಗಿಸುತ್ತಿದೆ.
ಪೇಜಾವರ ಮಠಕ್ಕೆ ಎಸ್ಪಿ ಬೇಟಿ
ರಥಬೀದಿಯಲ್ಲಿರುವ ಪೇಜಾವರ ಮಠಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ಬಿ.ನಿಂಬರಗಿ, ಜಿ.ಪಂ ಸಿಇಒ ಸಿಂದೂ ಬಿ.ರೂಪೇಶ್, ಎಎಸ್ಪಿ ಕುಮಾರಚಂದ್ರ. ಮೊದಲಾದ ಇಲಾಖೆ ಹಿರಿಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಠಡಿ, ಸಭಾಗೃಹ, ವರಾಂಡವನ್ನು ವೀಕ್ಷಿಸಿದರು. ಮಠದ ಮುಖ್ಯಸ್ಥರು, ಸಿಬ್ಬಂದಿಗಳೊಡನೆ ರಾಷ್ಟ್ರಪತಿ ಬೇಟಿ ಕುರಿತು ಸಮಾಲೋಚನೆ ನಡೆಸಿದರು. ಪೇಜಾವರ ಮಠದಲ್ಲಿ ಗೋಡೆ, ಮುಂಭಾಗದ ಗೇಟು, ಕಂಬಗಳಿಗೆ ಪೈಂಟಿಂಗ್ ಕಾರ್ಯ ಬರದಿಂದ ಸಾಗುತ್ತಿದೆ. ಏಳೆಂಟು ಮಂದಿ ಕಾರ್ಮಿಕರು ಪೈಂಟಿಂಗ್ ಕೆಲಸದಲ್ಲಿ ನಿರತರಾಗಿದ್ದಾರೆ.
ಹೆಲಿಪ್ಯಾಡ್ ರೆಡಿ
ರಾಷ್ಟ್ರಪತಿ ಅವರು ಮಧ್ಯಾಹ್ನ 11 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಆದಿ ಉಡುಪಿಗೆ ವಾಯು ಸೇನಾ ವಿಶೇಷ ಹೆಲಿಕಾಪ್ಟರ್ನಲ್ಲಿ 11:45ಕ್ಕೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಆದಿ ಉಡುಪಿ ಹೆಲಿಪ್ಯಾಡ್ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಬೆಳೆದುಕೊಂಡಿದ್ದ ಗಿಡಗಂಟಿ, ಹುಲ್ಲುಗಳನ್ನು ಕಡಿದು ಸಂಪೂರ್ಣ ಬಯಲು ಮಾಡಲಾಗಿದೆ. ಹೆಲಿಪ್ಯಾಡ್ ಮಾರ್ಕ್ಗೆ ಹೊಸದಾಗಿ ಬಿಳಿ ಬಣ್ಣದ ಪೈಂಟ್ ಬಳಿಯಲಾಗಿದೆ. ಇಲ್ಲಿ ಎರಡು ಹೆಲಿಪ್ಯಾಡ್ ವ್ಯವಸ್ಥೆ ಇದೆ.
ರಸ್ತೆಗಳಲ್ಲಿ ಇದೆ ಹೊಂಡ, ಗುಂಡಿ
ಆದಿ ಉಡುಪಿ ಹೆಲಿಪ್ಯಾಡ್ನಿಂದ ಶ್ರೀಕೃಷ್ಣಮಠಕ್ಕೆ ಆಗಮಿಸುವ ರಾಷ್ಟ್ರಪತಿಗಳಿಗೆ ಮೊದಲು ಹೆದ್ದಾರಿ ಹೊಂಡ, ಗುಂಡಿಗಳು ಸ್ವಾಗತ ಕೋರಲಿದೆ. ಆದಿ ಉಡುಪಿ ನಗರದಿಂದ ಕರಾವಳಿ ಜಂಕ್ಷನ್ ಹೋಗುವಾಗ ಮೂರ್ನಾಲ್ಕು ಹೊಂಡ, ಕಳಪೆ ರಸ್ತೆಯ ಪ್ರಯಾಣದ ಅನುಭವವವನ್ನು ದೇಶದ ಮೊದಲ ಪ್ರಜೆ ಅನುಭವಿಸಲಿದ್ದಾರೆ.
ನಗರದ ಮೇಲೆ ಗುಪ್ತಪಡೆ ಹದ್ದಿನಕಣ್ಣು
ದೇಶದ ಮೊದಲ ಪ್ರಜೆ, ಭಾರತೀಯ ಸೈನ್ಯದ ಮಹಾ ದಂಡನಾಯಕರು ಆಗಿರುವ ರಾಷ್ಟ್ರಪತಿಯ ಭದ್ರತೆ ಮತ್ತು ಶಿಷ್ಟಚಾರ ಅತ್ಯಂತ ಕಠಿಣ ಮತ್ತು ಬಿಗು ಎಂದೇ ಕರೆಯಲಾಗುತ್ತದೆ. ಆರ್ಮಿ ಇಂಟೆಲಿಜೆನ್ಸ್ ಬ್ಯೂರೊ(ಎಐಬಿ), ಸೆಂಟ್ರಲ್ ಇಂಟೆಲಿಜೆನ್ಸ್ ಬ್ಯೂರೊ(ಸಿಐಬಿ), ಹೋಮ್ ಅಫೇರ್ಸ್ ಇಂಟೆಲಿಜೆನ್ಸ್, ರೀಸರ್ಚ್ ಅನಾಲಿಸಿಸ್ ವಿಂಗ್(ರಾ)ನ ಅಂಡರ್ಕವರ್ ಏಜೆಂಟ್ಸ್ ರಾಷ್ಟ್ರಪತಿ ಬೇಟಿ ನೀಡುವ ಸ್ಥಳವನ್ನು ಎಲ್ಲಾ ಆಯಾಮಗಳಿಂದಲು ಪರಿಶೀಲಿಸಿ, ನಿಗಾವಹಿಸುತ್ತಾ ಎನ್ಎಸ್ಜಿ (ರಾಷ್ಟ್ರೀಯ ಭದ್ರತಾ ಪಡೆ)ಯೊಂದಿಗೆ ಕಮ್ಯೂನಿಕೇಟ್ ಮಾಡುತ್ತಾರೆ. ನಗರದ ಮೇಲೆ ಈಗಾಗಲೆ ರಾಷ್ಟ್ರದ ಎಲ್ಲಾ ಗುಪ್ತಚರ ಸಂಸ್ಥೆ ಹದ್ದಿನ ಕಣ್ಣಿರಿಸಿದೆ. ಭದ್ರತೆ ವಿಚಾರದಲ್ಲಿ ರಾಷ್ಟ್ರೀಯ ಭದ್ರತಾ ಪಡೆ ಅಧಿಕಾರಿಗಳೇ ಸುಪ್ರೀಂ ಆಗಿರುತ್ತಾರೆ. ಹೆಲಿಪ್ಯಾಡ್ ಮತ್ತು ಪ್ರವಾಸಿ ಮಂದಿರ, ಪೇಜಾವರ ಮಠವನ್ನು ಒಂದೆರಡು ಸುತ್ತುಗಳಲ್ಲಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಬಿಗು ಭದ್ರತೆಗೆ ಸಜ್ಜು
ರಾಷ್ಟ್ರಪತಿ ರಾಜ್ಯಪಾಲರು, ಮುಖ್ಯಮಂತ್ರಿಗಳು ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ಭದ್ರತೆ ಅತ್ಯಂತ ಸವಾಲಿನ ವಿಚಾರವಾಗಿದ್ದು ನಗರದಲ್ಲಿ ಬಿಗು ಭದ್ರತೆ ಏರ್ಪಡಿಸಲು ಜಿಲ್ಲಾ ಪೊಲೀಸ್ ಇಲಾಖೆ ಸಜ್ಜಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಭದ್ರತೆಗೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾವಿರ ಸಂಖ್ಯೆಯಲ್ಲಿ ಪೊಲೀಸರನ್ನು ನೀಯೋಜಿಸಲಾಗುತ್ತದೆ. ಕೆಎಸ್ಆರ್ಪಿ ತುಕಡಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ಮತ್ತು ಹೊರ ಜಿಲ್ಲೆಯ ಶ್ವಾನದಳ, ಸಿವಿಲ್ ಪೊಲೀಸರನ್ನು ಅಲ್ಲದೇ ಹೊರ ಜಿಲ್ಲೆಯ ಪೊಲೀಸರನ್ನು ಭದ್ರತೆಗೆ ನಿಯೋಜಿಸುವ ಸಾಧ್ಯತೆ ಹೆಚ್ಚಿದೆ.
ಪ್ರತಿಷ್ಠಿತ ಹೊಟೆಲ್ಗಳಲ್ಲಿ ಕೊಠಡಿ
ಮುಖ್ಯಮಂತ್ರಿ, ರಾಜ್ಯಪಾಲರು ಮತ್ತು ಅಧಿಕಾರಿ ವರ್ಗಕ್ಕೆ, ರಾಷ್ಟ್ರಪತಿ ಭವನದ ಅಧಿಕಾರಿ ವರ್ಗಕ್ಕೆ ನಗರದ ಪ್ರತಿಷ್ಠಿತ 3 ಖಾಸಗಿ ಹೊಟೆಲ್ಗಳಲ್ಲಿ 20 ಕೊಠಡಿಗಳನ್ನು ಮೀಸಲಿಡಲಾಗಿದೆ. ರಾಷ್ಟ್ರಪತಿ, ಅತೀ ಗಣ್ಯರು, ಗಣ್ಯರು, ಅಧಿಕಾರಿಗಳಿಗೆ 30 ಸರ್ಕಾರಿ ಇನ್ನೋವ ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.
ಅಂಗಡಿ ಮುಂಗಟ್ಟು ಬಂದ್
ರಾಷ್ಟ್ರಪತಿ ಕೃಷ್ಣ ಮಠಕ್ಕೆ ಭೇಟಿ ನೀಡುವುದರಿಂದ ಭಧ್ರತಾ ದೃಷ್ಟಿಯಿಂದ ಸಂಸ್ಕೃತ ಕಾಲೇಜು ಪಕ್ಕದ ಗೇಟಿನಿಂದ ಸಂಪೂರ್ಣ ರಥಬೀದಿಯ ಸುತ್ತ ಹಾಗೂ ರಾಜಾಂಗಣದ ಸುತ್ತಮುತ್ತ ಅಂಗಡಿ ಮುಂಗಟ್ಟುಗಳನ್ನು ಡಿ.26 ರ ಮಧ್ಯಾಹ್ನ 12 ಗಂಟೆಯಿಂದ 27ರ ಮಧ್ಯಾಹ್ನ 3 ಗಂಟೆಯವರೆಗೆ ಮುಚ್ಚಬೇಕು. ಡಿ.27ರಂದು ಬೆಳಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಸಾರ್ವಜನಿಕರಿಗೆ ಭೇಟಿ ನಿರ್ಬಂಧಿಸಲಾಗಿದೆ.