ಉಡುಪಿ,ಡಿ 27 (MSP): ಮಲ್ಪೆ ಬಂದರಿನಿಂದ ಆಳಸಮುದ್ರಕ್ಕೆ ಆಳಸಮುದ್ರ ಮೀನುಗಾರಿಕೆಗೆ ಹೊರಟಿದ್ದ ಬೋಟ್ ನಾಪತ್ತೆಯಾಗಿ 11 ದಿನ ಕಳೆದಿದ್ದು, ಕರಾವಳಿ ರಕ್ಷಣಾ ಪಡೆ ಶೋಧ ಕಾರ್ಯ ತೀವ್ರಗೊಳಿಸಿದೆ. ಆದರೂ ಯಾವುದೇ ಸುಳಿವು ಪತ್ತೆಯಾಗಿಲ್ಲ. ಚಂದ್ರಶೇಖರ್ ಕೋಟ್ಯಾನ್ ಮಾಲೀಕತ್ವದ ಸುವರ್ಣ ತ್ರಿಭುಜ ಬೋಟ್ ನಲ್ಲಿ ಡಿ.13ರಂದು ರಾತ್ರಿ 11 ಗಂಟೆ ಸುಮಾರಿಗೆ ಮಲ್ಪೆ ಬಂದರಿನಿಂದ ದಾಮೋದರ, ಲಕ್ಷ್ಮಣ, ಸತೀಶ, ರವಿ, ಹರೀಶ, ರಮೇಶ, ಜೋಗಯ್ಯ ಎಂಬುವರು ಮೀನುಗಾರಿಕೆಗೆ ತೆರಳಿದ್ದರು. ಡಿ.15ರ ಮಧ್ಯರಾತ್ರಿವರೆಗೂ ಮೀನುಗಾರರ ಸಂಪರ್ಕದಲ್ಲಿದ್ದ ಬೋಟ್ ಬಳಿಕ ಸಂಪರ್ಕಕ್ಕೆ ಸಿಕ್ಕಿಲ್ಲ. ನಾಪತ್ತೆಯಾದವರಿಗಾಗಿ ಮಂಗಳೂರು, ಗೋವಾದ ಕರಾವಳಿ ಕಾವಲು ಪಡೆ ತೀವ್ರ ಶೋಧ ನಡೆಸುತ್ತಿದ್ದು, ಮೀನುಗಾರರು ಮಾತ್ರ ಪತ್ತೆಯಾಗಿಲ್ಲ. ಬೋಟ್ಗೆ ಅಳವಡಿಸಿದ್ದ ಜಿಪಿಎಸ್ ಸಂಪರ್ಕಕ್ಕೆ ಸಿಗುತ್ತಿಲ್ಲ. 8 ಮೀನುಗಾರರ ಫೋನ್ಗಳು ಸ್ವಿಚ್ ಆಫ್ ಆಗಿದ್ದು, ಏನಾಗಿರಬಹುದು ಎನ್ನುವ ಸುಳಿವು ಸಿಕ್ಕಿಲ್ಲ.
ನಾಪತ್ತೆಯಾಗಿರುವ ಬೋಟ್ ಕಡಲುಗಳ್ಳರಿಂದ ದರೋಡೆಗೆ ಒಳಗಾಗಿರಬಹುದು. ಇಲ್ಲವೇ ಪಾಕಿಸ್ತಾನ ಗಡಿಯ ಭಯೋತ್ಪಾದಕರು ಬೋಟ್ ಅನ್ನು ಹೈಜಾಕ್ ಮಾಡಿರಬಹುದು ಎಂದು ಮೀನುಗಾರರ ಮುಖಂಡರು ಶಂಕಿಸಿದ್ದಾರೆ. ಆದರೆ, ಇದನ್ನು ಕರಾವಳಿ ಕಾವಲು ಪಡೆಯ ಅಧಿಕಾರಿಗಳು ಇದನ್ನು ಅಲ್ಲಗಳೆದಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಬೋಟ್ ಮಹಾರಾಷ್ಟ್ರ ಗಡಿ ಭಾಗದಲ್ಲಿ ಟವರ್ ಸಂಪರ್ಕಕ್ಕೆ ಸಿಕ್ಕಿದ್ದು ಬಳಿಕ ನಾಪತ್ತೆಯಾಗಿದೆ. ಬೋಟ್ ಹೈಜಾಕ್ ಆಗಿರುವ ಬಗ್ಗೆ ಶಂಕೆಯಿದ್ದು, ಶೋಧ ಮುಂದುವರಿದಿದೆ ಎಂದಿದ್ದಾರೆ.