ಬೆಳ್ತಂಗಡಿ,,ಡಿ 27 (MSP): ಹುಬ್ಬಳ್ಳಿ - ಧಾರವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ನಡೆದ ಭೀಕರ ಅಪಘಾತದಲ್ಲಿ ಮೂಲತಃ ಬೆಳ್ತಂಗಡಿ ತಾಲೂಕಿನ ಪೆರಾಡಿಯ, ಪ್ರಸ್ತಿತ ಮುಂಬಯಿಯಲ್ಲಿ ಉದ್ಯಮಿಯಾಗಿರುವ ಅನಿಲ್ ಟಿ ಶೆಟ್ಟಿ (65) ಮತ್ತು ಕುಶಲ ಶೆಟ್ಟಿ(55) ಮೃತಪಟ್ಟಿದ್ದಾರೆ. ಇವರ ಪುತ್ರ ಶೈಲೇಂದ್ರ ಕಾರು ಚಲಾಯಿಸುತ್ತಿದ್ದು ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದಾರೆ.
ಪೆರಾಡಿಯ ಬಂಡಸಾಲೆ ಸಂಜೀವ ಶೆಟ್ಟಿ ಅವರ ಮಗ ಸುಜಿತ್ ಶೆಟ್ಟಿ ಮದುವೆ ಶುಕ್ರವಾರ ಮೂಡುಬಿದಿರೆಯ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿತ್ತು. ಮಾವನ ಮಗನ ಮದುವೆಯಾದುದರಿಂದ ಬುಧವಾರ ರಾತ್ರಿ ನಡೆಯಬೇಕಾಗಿದ್ದ ಮೆಹಂದಿ ಕಾರ್ಯಕ್ರಮ ಸಹಿತ ಮದುವೆಯ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಮುಂಬಯಿ ಹಬ್ಬಳ್ಳಿ ಧಾರವಾದ ಮಾರ್ಗವಾಗಿ ಪೆರಾಡಿಗೆ ಬರುತ್ತಿದ್ದರು. ಸಂಚಾರದ ಮಧ್ಯೆ ಬುಧವಾರ ಹುಬ್ಬಳ್ಳಿ –ಧಾರವಾಡ ಹೆದ್ದಾರಿ ಪಕ್ಕ ನಿಂತಿದ್ದ ಟ್ಯಾಂಕರ್ ಒಂದಕ್ಕೆ ಡಿಕ್ಕಿ ಹೊಡೆದು, ಸ್ಥಳದಲ್ಲೇ ಅನಿಲ್ ಶೆಟ್ಟಿ ಮತ್ತು ಕುಶಲ ಶೆಟ್ಟಿ ಸಾವನ್ನಪ್ಪಿದ್ದಾರೆ.
ಈ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಮನೆಯಲ್ಲಿ ಮದುವೆಯ ಎಲ್ಲಾ ಕಾರ್ಯಕ್ರಮಗಳು ರದ್ದಾಗಿವೆ. ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕ ಆವರಿಸಿದೆ. ಗುರುವಾರ ಬೆಳಿಗ್ಗೆ ಮೃತದೇಹ ಅವರ ಮನೆ ಸೇರುವ ನಿರೀಕ್ಷೆ ಇದೆ. ದೂರದ ಮುಂಬೈಯಲ್ಲಿದ್ದರೂ ಊರಿನ ಮೇಲೆ ಅಪಾರ ಪ್ರೀತಿ ಇದ್ದ ವ್ಯಕ್ತಿ ಅನಿಲ್ ಶೆಟ್ಟಿ, ಕೊಡುಗೈ ದಾನಿ. ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಕಳೆದ 30 ವರ್ಷಗಳಿಂದ ಅವರು ಪೆರಾಡಿಯ ಮೂಲಮನೆ ಬಂಡಸಾಲೆಯಲ್ಲಿ ಕಟೀಲು ಮೇಳದ ಯಕ್ಷಗಾನವನ್ನು ನಿರಂತರವಾಗಿ ಆಡಿಸುತ್ತಾ ಬಂದಿದ್ದರು.