ಉಡುಪಿ,ಡಿ 27 (MSP): ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಸನ್ಯಾಸ ಸ್ವೀಕರಿಸಿ 80 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಪೇಜಾವರ ಶ್ರೀಗಳನ್ನು ಸನ್ಮಾನಿಸಲು ಆಗಮಿಸಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಇಂದು ಮಧ್ಯಾಹ್ನ ಸುಮಾರು 12ಕ್ಕೆ ಆದಿ ಉಡುಪಿಯ ಹೆಲಿಪ್ಯಾಡ್ಗೆ ಬಂದಿಳಿದಿದ್ದಾರೆ. ಉಡುಪಿಗೆ ಆಗಮಿಸಿದ ಅವರನ್ನು ರಾಜ್ಯಪಾಲ ವಾಜುಬಾಯಿ ರೂಢಬಾಯಿ ವಾಲಾ ಅವರು ಸ್ವಾಗತಿಸಿದರು. ಇವರೊಂದಿಗೆ ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ ಆಚಾರ್ಯ ಜೊತೆಗಿದ್ದರು.
ಆದಿಉಡುಪಿ ಹೆಲಿಪ್ಯಾಡ್ ನಿಂದ ಝೀರೋ ಟ್ರಾಫಿಕ್ ಮೂಲಕ ರಾಷ್ಟ್ರಪತಿಗಳು ಕಾರಿನಲ್ಲಿ ಪೇಜಾವರ ಮಠಕ್ಕೆ ತೆರಳಿದ್ದಾರೆ. ಅಲ್ಲಿ ಪೇಜಾವರ ಮಠದ ದಿವಾನರಾದ ರಘುರಾಮ್ ಆಚಾರ್ಯ ಅವರು ರಾಷ್ಟ್ರಪತಿಗಳನ್ನು ಸ್ವಾಗತಿಸಿ ಮಠದೊಳಗೆ ಕರೆದೊಯ್ಯಲಿದ್ದಾರೆ.
ಬಳಿಕ 10 ನಿಮಿಷ ನಡೆಯುವ ಕಿರು ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳು ಪೇಜಾವರ ಶ್ರೀಗಳನ್ನು ಅಭಿನಂದಿಸಲಿದ್ದಾರೆ. ಬಳಿಕ ಪೇಜಾವರ ಮಠದಿಂದ ರಾಷ್ಟ್ರಪತಿಗಳನ್ನು ಸನ್ಮಾನಿಸಲಾಗುವುದು. ಈ ಸಂದರ್ಭ ಶ್ರೀಗಳ ಶಿಷ್ಯೆ, ಕೇಂದ್ರ ಸಚಿವೆ ಉಮಾ ಭಾರತಿ ಕೂಡ ಉಪಸ್ಥಿತರಿರಲಿದ್ದಾರೆ. ಬಳಿಕ 12.45ಕ್ಕೆ ಕೃಷ್ಣಮಠಕ್ಕೆ ಭೇಟಿನೀಡಿ ಕೃಷ್ಣನ ದರ್ಶನ ಪಡೆಯಲಿದ್ದಾರೆ. ನಂತರ ಹೆಲಿಕಾಪ್ಟರ್ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ.