ಕಿನ್ನಿಗೋಳಿ, ಡಿ27(SS): ಬ್ಯಾರಿ ಸಮುದಾಯದ ಮಂದಿ ಶ್ರಮಜೀವಿಗಳು, ಹೋರಾಟದ ಮೂಲಕವೇ ತಮ್ಮ ಬದುಕು ಕಟ್ಟಿಕೊಂಡವರು ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅಭಿಪ್ರಾಯಪಟ್ಟರು.
ಕಿನ್ನಿಗೋಳಿಯ ಶಾಂತಿನಗರ ಗುತ್ತಕಾಡು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ನಡೆದ ಬ್ಯಾರಿ ಸೌಹಾರ್ದ ಸಾಂಸ್ಕೃತಿಕ ಮೇಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ದೇಶ ಮಾತ್ರವಲ್ಲದೆ ವಿದೇಶದಲ್ಲೂ ಬ್ಯಾರಿ ಸಮುದಾಯ ತಮ್ಮ ಪರಿಶ್ರಮದಿಂದಾಗಿ ಅಸ್ತಿತ್ವವನ್ನು ತೋರ್ಪಡಿಸಿದೆ. ಜೊತೆಗೆ ಕಷ್ಟ ಪಟ್ಟು ದುಡಿದು ತನ್ನೂರಿನಲ್ಲಿ ಬಂಡವಾಳ ಹೂಡಿ ಅಭಿವೃದ್ಧಿಗೆ ಸಹಕರಿಸುತ್ತಿರುವ ಸಮುದಾಯವಾಗಿದೆ ಎಂದು ಹೇಳಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ, ಸಾಹಿತ್ಯ ಉಳಿಸುವ ಜೊತೆಗೆ ಬ್ಯಾರಿ ಸಮುದಾಯದ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಕೆಲಸ ನಡೆಯುತ್ತಿರುವುದು ಅಭಿನಂದನೀಯ. ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗೂ ಹೆಚ್ಚು ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿ ಜಿಲ್ಲೆಯಾದ್ಯಂತ ಇಂತಹ ಕಾರ್ಯಕ್ರಮಗಳನ್ನು ಮಾಡುವಂತಾಗಲಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕಿನ್ನಿಗೋಳಿ ಗ್ರಾಮ ಪಂಚಾಯತ್ನ ಹಿರಿಯ ಸದಸ್ಯರಾದ ಟಿ.ಎಚ್.ಮಯ್ಯದ್ದಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕರಂಬಾರು ಮುಹಮ್ಮದ್ ದಫ್ ಬಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸರಕಾರಿ ಪದವಿ ಪೂರ್ವ ಕಾಲೇಜು ಬಿ.ಮೂಡ ಇಲ್ಲಿನ ಉಪನ್ಯಾಸಕರಾದ ಅಬ್ದುಲ್ ರಝಾಕ್ ಅನಂತಾಡಿ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಸದಸ್ಯ ದಿವಾಕರ ಕರ್ಕೇರ, ಮಾಜಿ ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್, ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಸದಸ್ಯೆ ವಾಣಿ, ಶ್ರೀಮೂಕಾಂಬಿಕಾ ದೇವಸ್ಥಾನ ಧರ್ಮದರ್ಶಿ ವಿವೇಕಾನಂದ, ನಾಗರಿಕ ಹಿತರಕ್ಷಣ ವೇದಿಕೆ ಅಧ್ಯಕ್ಷ ಟಿ.ಎ.ಹನೀಫ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಗುತ್ತಿಗೆದಾರ ಬಿ.ಸೈದಾಲಿ, ಖಿಲ್ರಿಯಾ ಇಂಗ್ಲೀಷ್ ಮೀಡಿಯಂ ಪಬ್ಲಿಕ್ ಸ್ಕೂಲ್ ಸಂಚಾಲಕ ಟಿ.ಕೆ. ಅಬ್ದುಲ್ ಖಾದರ್ ಉಪಸ್ಥಿತರಿದ್ದರು.