ಕುಂದಾಪುರ, ಅ 21: ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಗುಲ್ವಾಡಿಯಲ್ಲಿ ಅ.17ರಂದು ಗೂಡ್ಸ್ ಟೆಂಪೊವೊಂದರಲ್ಲಿ 25ಕ್ಕೂ ಅಧಿಕ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗುಲ್ವಾಡಿಯ ಗಾಂಧಿನಗರ ನಿವಾಸಿ ಮೊಯ್ದೀನ್ ಬ್ಯಾರಿ ಯಾನೆ ಮೋನು ಬಂಧಿತ ಆರೋಪಿ. ಘಟನೆ ನಡೆದ ಬಳಿಕ ಆರೋಪಿ ಮೋನು ತಲೆಮರೆಸಿಕೊಂಡಿದ್ದ. ಪದೇ ಪದೇ ಸಿಮ್ ಬದಲಾಯಿಸಿ ಪೊಲೀಸರ ಕಣ್ಣು ತಪ್ಪಿಸಿದ್ದ. ಆದರೆ ಅಂತಿಮವಾಗಿ ಪೊಲೀಸರ ವಶವಾಗಿದ್ದಾನೆ.
ಕಳೆದ ಮೂರು ದಿನಗಳಿಂದ ಪ್ರಕರಣದ ಹಿಂದೆ ಬಿದ್ದಿದ್ದ ಪೊಲೀಸರ ತಂಡ ಪ್ರಮುಖ ಆರೋಪಿಯನ್ನು ಬಂಧಿಸಿದ್ದು, ಉಳಿದ ಆರೋಪಿಗಳಿಗೆ ಬಲೆ ಬೀಸಿದ್ದಾರೆ.
ಘಟನೆ ಹಿನ್ನೆಲೆ:
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಗುಲ್ವಾಡಿ ಕಡೆಯಿಂದ ಅಕ್ರಮವಾಗಿ ಗೋವನ್ನು ಬಸ್ರೂರು ಮೂಲಕ ಸಾಗಿಸಲಾಗುತ್ತಿದೆ ಎನ್ನುವ ಮಾಹಿತಿ ಮೇರೆಗೆ, ಗುಲ್ವಾಡಿ ಸೇತುವೆ ಮೇಲೆ ವಾಹನವನ್ನು ಅಡ್ಡ ಹಾಕುವ ಉದ್ದೇಶದಿಂದ ಪೊಲೀಸರು ಕಾರ್ಯಾಚರಣೆಗಿಳಿದ್ದರು. ಆದರೆ ಕೂದಲೆಳೆ ಅಂತರದಿಂದ ತಪ್ಪಿಸಿಕೊಂಡ ಆರೋಪಿಗಳು ಬಸ್ರೂರು ಮೂಲಕ ಕಂಡ್ಲೂರು ಕಡೆ ತೆರಳಿದ್ದರು. ಹೀಗಾಗಿ ಪೊಲೀಸರು ಠಾಣೆ ಎದುರು ಬ್ಯಾರಿಕೇಡ್ ಅಳವಡಿಸಿ ವಾಹನಕ್ಕೆ ತಡೆಯೊಡ್ಡುವಂತೆ ಸೂಚಿಸಿದ್ದರು. ಈ ಹಿನ್ನೆಲೆ ಸಿಬ್ಬಂದಿಗಳಾದ ಅಶೋಕ್ ಮತ್ತು ಪ್ರಶಾಂತ್ ನಾಗಣ್ಣ ಬ್ಯಾರಿಕೆಡ್ ಅಳವಡಿಸಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವಾಹನಕ್ಕಾಗಿ ಕಾದಿದ್ದರು. ಆದರೆ ಸ್ಥಳಕ್ಕೆ ಬಂದ ಅಕ್ರಮ ಗೋಸಾಗಾಟಗಾರರ ವಾಹನ ಬ್ಯಾರಿಕೇಡ್ನ್ನು ಮುರಿದು ಸ್ಥಳದಿಂದ ಪರಾರಿಯಾಗಿದ್ದರು. ಈ ಸಂದರ್ಭ ಆಳೆತ್ತರಕ್ಕೆ ಹಾರಿದ ಬ್ಯಾರಿಕೇಡ್ ಪ್ರಶಾಂತ್ ನಾಗಣ್ಣರ ಮಂಡಿ ಮೇಲೆ ಬಿದ್ದಿದ್ದು, ಮಂಡಿ ಚಿಪ್ಪಿಗೆ ತೀವ್ರ ಪ್ರಮಾಣದ ಗಾಯವಾಗಿತ್ತು.
ಪೊಲೀಸರ ಹರಸಾಹಸದಿಂದ ಗುಲ್ವಾಡಿ ಸೇತುವೆ ಸಮೀಪ ಅಕ್ರಮ ಗೋ ಸಾಗಾಟ ನಡೆಸುತ್ತಿದ್ದ ವಾಹನ ತಡೆ ಹಿಡಿದಿದ್ದು, ವಾಹನದಲ್ಲಿ 25 ಜಾನುವಾರುಗಳು ಪತ್ತೆಯಾಗಿತ್ತು. ಈ ಕುರಿತು ಕಂಡ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.