ಕುಂದಾಪುರ,ಡಿ 27 (MSP): ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಕುಮುಟದ ಯುವ ಜೋಡಿಗಳು ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಬುಧವಾರ ಬೆಳಿಗ್ಗೆ ಶಂಕರನಾರಾಯಣದಲ್ಲಿ ಪತ್ತೆಯಾಗಿದ್ದಾರೆ. ಕುಮುಟಾ ಮೂಲದ ತಬಲ ಕಲಾವಿದ ನಾಗರಾಜ ಭಟ್(26) ಹಾಗೂ ನಾಗರತ್ನ ದತ್ತಾತ್ರೇಯ ಹೆಗ್ಡೆ (21) ಎಂಬುವರೇ ಪ್ರೇಮಿಗಳು.
ನಾಗರಾಜ್ ಭಟ್ ಸ್ಥಳೀಯವಾಗಿ ವೃತ್ತಿ ಮಾಡಿಕೊಂಡಿದ್ದು ತಬಲಾ ಕಲಾವಿದರಾಗಿದ್ದಾರೆ. ನಾಗರತ್ನ ದತ್ತಾತ್ರೇಯ ಹೆಗ್ಡೆ ಪಿಯುಸಿ ಬಳಿಕ ಸಂಗೀತ ಅಭ್ಯಾಸ ಮಾಡಿಕೊಂಡಿದ್ದು, ಪರಸ್ಪರ ಒಬ್ಬರನ್ನೊಬ್ಬರು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಆದರೆ ಯುವತಿಯ ಮನೆಯವರು ಸಾಕಷ್ಟು ಶ್ರೀಮಂತರಾಗಿದ್ದರಿಂದ ಇವರ ಮದುವೆಗೆ ಯುವತಿಯ ಮನೆಯವರಿಂದ ಪ್ರಬಲವಾದ ವಿರೋಧವಿತ್ತು ಎನ್ನಲಾಗಿದೆ. ಇದರಿಂದ ಹೆದರಿದ ಜೋಡಿ ಕಳೆದ ನಾಲ್ಕು ದಿನಗಳ ಹಿಂದೆ ಮನೆ ಬಿಟ್ಟಿದ್ದರು.
ನಾಗರತ್ನ ಮನೆಯಿಂದ ಕಾಣೆಯಾದ ಬೆನ್ನಿಗೇ ಯುವತಿ ಮನೆಯವರು ವ್ಯಾಪಕ ಶೋಧ ನಡೆಸಲು ಆರಂಭಿಸಿದ್ದು, ಯುವಕನನ್ನು ಕೊಲ್ಲುವ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಜೋಡಿಗೆ ಸುದ್ಧಿ ತಿಳಿದ ತಕ್ಷಣ ಗಾಬರಿಯಾಗಿದ್ದಾರೆ. ಬುಧವಾರ ಬೆಳಿಗ್ಗೆ ಶಂಕರನಾರಾಯಣದಲ್ಲಿಳಿದುಕೊಂಡ ಜೋಡಿ ಅಲ್ಲಿಯ ದೇವಸ್ಥಾನದಲ್ಲಿ ವಿವಾಹವಾಗಿ ಶಂಕರನಾರಾಯಣ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ.
ಶಂಕರನಾರಾಯಣ ಪೊಲೀಸರು ತಕ್ಷಣ ಪ್ರೇಮಿಗಳ ವಿಳಾಸ ಪಡೆದು ಇಬ್ಬರ ಮನೆಯವರಿಗೂ ಸುದ್ಧಿ ಮುಟ್ಟಿಸಿ ಠಾಣೆಗೆ ಕರೆಯಿಸಿಕೊಂಡಿದ್ದಾರೆ. ಇದೇ ವೇಳೆ ಪೋಷಕರ ಸಮ್ಮುಖದಲ್ಲಿ ಯುವತಿ ಹೇಳಿಕೆ ನೀಡಿದ್ದು, ಪ್ರಿಯಕರನನ್ನು ಬಿಟ್ಟು ಪೋಷಕರ ಜೊತೆಗೆ ಕಳುಹಿಸಿಕೊಟ್ಟರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದಾಳೆ. ಇಬ್ಬರು ಪ್ರಾಪ್ತ ವಯಸ್ಕರಾಗಿದ್ದ ಕಾರಣ ಪೊಲೀಸರು ಯುವಕನ ಮನೆಯವರ ಜೊತೆಗೆ ಕಳುಹಿಸಿಕೊಟ್ಟಿದ್ದಾರೆ. ಕುಮುಟಾದಲ್ಲಿ ವಿವಾಹ ನೋಂದಣಿ ಮಾಡಿಕೊಳ್ಳುವುದಾಗಿ ಯುವಕನ ಪೋಷಕರು ಭರವಸೆ ನೀಡಿ ಯುವತಿಯನ್ನು ಕರೆದೊಯ್ದಿದ್ದಾರೆ.