ಉಡುಪಿ, ಅ 21: ಲಿಂಗಾಯತರು ಹಿಂದೂ ಧರ್ಮ ತೊರೆಯದಿರಿ ಎನ್ನುವ ಪೇಜಾವರ ಶ್ರೀಗಳ ಹೇಳಿಕೆ ರಾಜಕೀಯ ತಿರುವು ಪಡೆದುಕೊಂಡಿದ್ದು, ವಿವಾದಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ಪೇಜಾವರ ಶ್ರೀ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಾನು ಭಯದಿಂದ ನೀಡಿದ ಹೇಳಿಕೆ ಇದಲ್ಲ. ಲಿಂಗಾಯತರ ಮೇಲೆ ಯಾವ ವಿರೋಧವೂ ನನಗಿಲ್ಲ. ಲಿಂಗಾಯತರು ನಮ್ಮವರು ಎಂಬುದಷ್ಟೇ ನನ್ನ ಕಾಳಜಿ ಎಂದು ಪೇಜಾವರ ಶ್ರೀ ಹೇಳಿದ್ದಾರೆ.
ಎಲ್ಲಾ ಹಿಂದೂ ಸಮಾವೇಶದಲ್ಲಿ, ವಿಶ್ವ ಹಿಂದು ಪರಿಷತ್ ಕಾರ್ಯಕ್ರಮದಲ್ಲಿ ಲಿಂಗಾಯತರು, ವಿರಕ್ತಿ ಮಠಾಧೀಶರು ಪಾಲ್ಗೊಂಡಿದ್ದಾರೆ. ಉಡುಪಿಯಲ್ಲಿ 1968 ರಲ್ಲಿ ವಿಶ್ವ ಹಿಂದು ಪರಿಷತ್ ಪ್ರಾಂತೀಯ ಸಮಾವೇಶ ನಡೆದಿತ್ತು. ಈ ಸಮಾವೇಶದಲ್ಲಿ ಸಿದ್ದಗಂಗಾಶ್ರೀ, ಆಗಿನ ಸುತ್ತೂರುಶ್ರೀ ಭಾಗವಹಿಸಿದ್ದರು ಎಂದು ಹೇಳಿದರು.
ಹಿಂದೂ ಧರ್ಮ ದುರ್ಬಲವಾಗಬಾರದು. ವೈಯಕ್ತಿಕ ಸ್ವಾರ್ಥದಿಂದ ಈ ಮಾತು ನಾನು ಹೇಳುತ್ತಿಲ್ಲ. ಲಿಂಗಾಯತರ ಮೇಲೆ ಪ್ರೀತಿಯಿಂದ ಇಷ್ಟೆಲ್ಲಾ ಹೇಳುತ್ತಿದ್ದೇನೆ. ಈ ಬಗ್ಗೆ ಉಡುಪಿಯಲ್ಲಿ ಚರ್ಚೆಯಾಗಲಿ. ಜನವರಿ 18 ರ ನಂತರ ಬೆಂಗಳೂರಿನಲ್ಲಿ ಚರ್ಚೆಯಾಗಲಿ. ನಾನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯುವ ಚರ್ಚೆಗೆ ಬರಲು ಸಿದ್ಧ ಎಂದು ಹೇಳಿದರು.