ಬೆಂಗಳೂರು, ಡಿ 28(): ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ಕಾಂಗ್ರೆಸ್ ಪಕ್ಷದ ಎಂಟು ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಆರು ದಿನಗಳ ಬಳಿಕ ಕೊನೆಗೂ ಖಾತೆ ಹಂಚಿಕೆ ಅಂತಿಮಗೊಂಡಿದೆ.
ಸಚಿವ ಸ್ಥಾನ ಸಿಗದ ಅತೃಪ್ತ ಶಾಸಕರ ಅಸಮಾಧಾನ, ತಮಗೆ ನಿಗಮ, ಮಂಡಳಿ ನೀಡಿದ್ದಕ್ಕೆ ಮತ್ತು ನೀಡದೆ ಇರುವುದಕ್ಕೆ ಕೆಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದೊಳಗಿನ ಬಂಡಾಯದ ನಡೆಗಳು ಮತ್ತು ಇಂಥದ್ದೇ ಖಾತೆ ಬೇಕು ಎಂಬ ಸಚಿವರ ಹಠದ ನಡುವೆಯೇ ಹೈಕಮಾಂಡ್ ಗೊಂದಲಗಳಿಗೆ ಅಂತಿಮ ಷರಾ ಬರೆದಿದೆ.
ಸಂಪುಟ ಸೇರುವ ಎಂಟು ಮಂದಿಯ ಹೆಸರನ್ನು ಡಿಸೆಂಬರ್ 21ರಂದು ರಾಹುಲ್ ಗಾಂಧಿ, ಅಂತಿಮಗೊಳಿಸಿದ್ದರು. ಮರುದಿನ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ನಡೆದಿತ್ತು. ಆದರೆ, ಅದರ ಬೆನ್ನಲ್ಲೇ ಮತ್ತೆ ಖಾತೆ ಹಂಚಿಕೆ ಗೊಂದಲ ತಲೆದೋರಿತ್ತು. ಇದರಿಂದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಇಬ್ಬರೂ ಪುನಃ ರಾಹುಲ್ ಗಾಂಧಿ ಮೊರೆ ಹೋಗಿದ್ದರು. ಈಗ ಖಾತೆ ಹಂಚಿಕೆಯ ಪಟ್ಟಿಗೆ ರಾಹುಲ್ ಗಾಂಧಿ ಅನುಮೋದನೆ ನೀಡಿದ್ದಾರೆ. ಹೊಸ ಸಚಿವರಿಗೆ ಖಾತೆ ಹಂಚಿಕೆಯ ಜೊತೆಗೆ ಹಳೆಯ ಸಚಿವರ ಖಾತೆಯಲ್ಲಿಯೂ ಬದಲಾವಣೆ ಮಾಡಲಾಗಿದೆ.
ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರ ಬಳಿಯಿದ್ದ ಗೃಹ ಖಾತೆಯ ಮೇಲೆ ಕಣ್ಣಿಟ್ಟಿದ್ದ ಎಂ.ಬಿ. ಪಾಟೀಲ್, ಕೊನೆಗೂ ಅದನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪರಮೇಶ್ವರ್ ಅವರಿಗೆ ಬೆಂಗಳೂರು ನಗರ, ಸಂಸದೀಯ ವ್ಯವಹಾರ, ಐಟಿ ಬಿಟಿ ಖಾತೆಗಳ ಜವಾಬ್ದಾರಿ ನೀಡಲಾಗಿದೆ. ಜಯಮಾಲಾ ಅವರು ತಮ್ಮ ಬಳಿಯಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಕಳೆದುಕೊಂಡಿದ್ದಾರೆ. ಆ ಇಲಾಖೆಯನ್ನು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಹೆಚ್ಚುವರಿಯಾಗಿ ವಹಿಸಲಾಗಿದೆ. ಜಯಮಾಲಾ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿ ಮುಂದುವರಿಯಲಿದ್ದಾರೆ.