ಉಡುಪಿ, ಡಿ29(SS): ಲೋಕಾಯುಕ್ತ ಸಂಸ್ಥೆಯಲ್ಲಿದ್ದಾಗ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನ ಎನಿಸಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ(47) ಅನಾರೋಗ್ಯದಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸಿ ವಿಧಿವಶರಾಗಿದ್ದಾರೆ.
ಮಧುಕರ್ ಶೆಟ್ಟಿ ತಮ್ಮ ಸೇವಾ ಅವಧಿಯಲ್ಲಿನ ಧಕ್ಷ ಹಾಗೂ ಪ್ರಾಮಾಣಿಕ ನಿಲುವುಗಳಿಂದ ಸಾಕಷ್ಟು ಭ್ರಷ್ಟರಿಗೆ ಕಂಟಕಪ್ರಾಯರಾಗಿದ್ದರು. ಯಾವ ಸರ್ಕಾರ ಸಚಿವರು ಅಥವಾ ಯಾರ ಮುಲಾಜಿಗೂ ಸಿಲುಕದೆ ಕೆಲಸ ಮಾಡುವುದು ಅವರ ಕಾರ್ಯಪ್ರವೃತ್ತಿಯಾಗಿತ್ತು.
ಹೆಚ್ಚು ಮೃದು ಭಾಷಿಯಾಗಿದ್ದ ಮಧುಕರ್ ಶೆಟ್ಟಿ ಯಾವ ವಿಚಾರದಲ್ಲಿಯೂ ರಾಜಿಯಾದವರಲ್ಲ. ಒಬ್ಬ ಸಚಿವ ಹಾಗೂ ಅವರ ಮಗನ ವಿರುದ್ಧ ಭೂಕಬಳಿಕೆ ಆರೋಪ ಬಂದಾಗ ಅದನ್ನು ದಿಟ್ಟವಾಗಿ ತನಿಖೆ ನಡೆಸಿ ಜೈಲಿಗೆ ಹಾಕುವುದರಲ್ಲಿ ಯಶಸ್ವಿಯಾಗಿದ್ದರು. ಮಾತ್ರವಲ್ಲ, ಯಾರ ಒತ್ತಡಕ್ಕೂ ಮಣಿಯದೆ ಕೆಲಸ ಮಾಡಿದ್ದರು.
ಲೋಕಾಯುಕ್ತದಲ್ಲಿ ಎಸ್ಪಿಯಾಗಿದ್ದಾಗ ಮಧುಕರ್ ಶೆಟ್ಟಿ ಮನೆ ಮಾತಾಗಿದ್ದರು. ಲೋಕಾಯುಕ್ತ ಎಸ್ಪಿಯಾಗಿ ನಿಯೋಜನೆಗೊಂಡ ಎರಡೇ ತಿಂಗಳಿಗೆ 2 ಜಿಲ್ಲೆಯ ಎಸ್ಪಿಗಳನ್ನು ಟ್ರಾಪ್ ಮಾಡಿ ಲಂಚ ಪಡೆಯುವಾಗ ಜೈಲಿಗೆ ಅಟ್ಟಿದ್ದರು. ಅನೇಕ ಮಾರುವೇಷದಲ್ಲಿಕಾರ್ಯಾಚರಣೆನಡೆಸಿಪೊಲೀಸರಿಗೆಬಿಸಿಮುಟ್ಟಿಸುತ್ತಿದ್ದರು.
ಒಬ್ಬ ಐಪಿಎಸ್ ಅಧಿಕಾರಿಯಾಗಿ ತನ್ನ ಕರ್ತವ್ಯ ನಿಭಾಯಿಸಿದ್ದ ಮಧುಕರ್ ಶೆಟ್ಟಿ ಕೇವಲ ಸರ್ಕಾರ ಕೊಡುವ ಸಂಬಳಕ್ಕೆ ಕೆಲಸ ಮಾಡಿದ್ದರು. ಸರಕಾರದ ನಿವೇಶನದ ಉಡುಗೊರೆ ಅಥವಾ ಇನ್ಯಾವುದೇ ರೀತಿಯ ಉಡುಗೊರೆಯನ್ನು ಸ್ವೀಕರಿಸಿರಲಿಲ್ಲ.
ಇದೀಗ ಮಧುಕರ್ಶೆಟ್ಟಿ ನಿಧನಕ್ಕೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದು, ದಿಟ್ಟ ಅಧಿಕಾರಿಯನ್ನು ನೆನೆದು ಅವರ ಅಭಿಮಾನಿಗಳೂ ಕಣ್ಣೀರಾಗಿದ್ದಾರೆ.