ಮಂಗಳೂರು ಡಿ30: ಎಚ್1ಎನ್1 ಸೋಂಕಿಗೆ ತುತ್ತಾಗಿ ಹೈದರಬಾದಿನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ನಿಧನರಾದ ಐಪಿಎಸ್ ಅಧಿಕಾರಿ ಡಾ. ಮಧುಕರ್ ಶೆಟ್ಟಿಯವರ ಪಾರ್ಥಿವ ಶರೀರ ನಿನ್ನೆ ರಾತ್ರಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಅವರ ಅಂತಿಮ ದರ್ಶನಕ್ಕಾಗಿ ಸರಕಾರಿ ಅಧಿಕಾರಿಗಳು ಹಾಗೂ ರಾಜಕೀಯ ವಲಯದ ಗಣ್ಯರು ಬಹುದೊಡ್ಡ ಸಂಖೆಯಲ್ಲಿ ನೆರೆದಿದ್ದರು. ಜಿಲ್ಲಾ ಪೋಲಿಸ್ ಅಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ , ವಿಧಾನ ಪರಿಷತ್ತ್ ಸದಸ್ಯರಾದ ಐವನ್ ಡಿ ಸೋಜ, ಮೇಯರ್ ,ಭಾಸ್ಕರ್ ಮೊಯ್ಲಿ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಮಹಾನಗರ ಪಾಲಿಕೆಯ ಆಯುಕ್ತರಾದ ನಝೀರ್, ಮಾಜಿ ಶಾಸಕರಾದ ಜೆ.ಆರ್ ಲೋಬೊ, ಅಭಯ ಚಂದ್ರ ಜೈನ್ ಮತ್ತಿತರ ಪ್ರಮುಖರು ವಿಮಾನ ನಿಲ್ದಾನಕ್ಕೆ ಆಗಮಿಸಿ ಅಗಲಿದ ದಕ್ಷ ಪೋಲಿಸ್ ಅಧಿಕಾರಿಗೆ ಅಂತಿಮ ನಮನ ಸಲ್ಲಿಸಿದರು. ವಿಮಾನ ನಿಲ್ದಾನದಲ್ಲಿ ಸಾರ್ವಜನಿಕರಿಗೆ ಮಧುಕರ್ ಅಂತಿಮ ದರ್ಶನಕಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು.
ಈ ನಡುವೆ ರಾಜ್ಯದಲ್ಲೇ ಖಡಕ್ ಐಪಿಎಸ್ ಅಧಿಕಾರಿಯೆಂದು ಹೆಸರುವಾಸಿಯಾದ ಮಧುಕರ್ ಅವರ ಅಂತಿಮ ದರ್ಶನಕ್ಕೆ ಜಿಲ್ಲೆಯ ಬಿಜೆಪಿ ಶಾಸಕರು ಹಾಗೂ ಉಭಯ ಜಿಲ್ಲೆಯ ಸಂಸದರು ಗೈರು ಹಾಜರಾಗಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಡಾ.ಮಧುಕರ್ ಕುಂದಾಪುರದವರಾದ್ದುದರಿಂದ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆಯ ಉಪಸ್ಥಿತಿ ಅತ್ಯಗತ್ಯವಾಗಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ. ಇದಲ್ಲದೆ ದಕ್ಷಿಣ ಕನ್ನಡದ ಯಾವೊಬ್ಬ ಶಾಸಕನೂ ವಿಮಾನ ನಿಲ್ದಾಣಕ್ಕೆ ಬಂದು ಜನಮೆಚ್ಚಿದ ಅಧಿಕಾರಿಗೆ ಗೌರವ ಅರ್ಪಿಸಲು ಮುಂದಾಗದ್ದು ಜನಸಾಮಾನ್ಯರ ನಡುವೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ಇವರು ತಮ್ಮ ಅಕ್ರೋಶವನ್ನು ಬಹಿರಂಗವಾಗಿಯೇ ತೋರ್ಪಡಿಸಿದ್ದಾರೆ.