ಉಳ್ಳಾಲ ವಲಯ ಡಿವೈಎಫ್ಐ ವತಿಯಿಂದ ಅಣುಕು ಉದ್ಘಾಟನೆ
ತೊಕ್ಕೊಟ್ಟು ಡಿ 30: ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿಯನ್ನು ಈ ವರ್ಷದ ಡಿಸೆಂಬರ್ 30ರೊಳಗೆ ಪೂರ್ಣಗೊಳಿಸುವುದಾಗಿ ಹೇಳಿ ಇನ್ನೂ ಶೇ. 50ರಷ್ಟು ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಸಾಧ್ಯವಾಗದೇ ಇರುವ ಸಂಸದ ನಳಿನ್ ಕುಮಾರ್ ಕಟೀಲ್, ಹಾಗೂ ಹೆದ್ದಾರಿ ಪ್ರಾಧಿಕಾರದ ನಿಷ್ಕ್ರಿಯತೆಯನ್ನು ಖಂಡಿಸಿ ಉಳ್ಳಾಲ ವಲಯ ಡಿವೈಎಫ್ಐ ಇಂದು ನರೇಂದ್ರ ಮೋದಿ, ನಿತಿನ್ ಗಡ್ಕರಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮುಖವಾಡ ಧರಿಸಿದ ವ್ಯಕ್ತಿಗಳನ್ನು ಮೆರವಣಿಗೆಯಲ್ಲಿ ಕರೆತಂದು ಮೇಲ್ಸೇತುವೆಯ ಅಣುಕು ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಅಚ್ಛೇ ದಿನ್ ಕೊಡುತ್ತೇವೆ ಎನ್ನುತ್ತಾ ಅಧಿಕಾರಕ್ಕೆ ಬಂದ ಮೋದಿ ಸರ್ಕಾರಕ್ಕೆ ಇದುವರೆಗೆ ಒಂದು ಅಚ್ಛೇ ಸಡಕ್ ಅಂದರೆ ಉತ್ತಮ ರಸ್ತೆ ಕೊಡಲು ಸಾಧ್ಯವಾಗಿಲ್ಲ. ಇದಕ್ಕೆ ಮಂಗಳೂರಿನ ಪಂಪ್ ವೆಲ್, ತೊಕ್ಕೊಟ್ಟು ರಸ್ತೆಗಳೇ ಉತ್ತಮ ಉದಾಹರಣೆ ಎಂದರು. ಇಂದು ನಾವು ಇಲ್ಲಿ ನಡೆಸಿದ ಅಣಕು ಉದ್ಘಾಟನೆ ಇಲ್ಲಿನ ಸಂಸದರು ಮಾತು ತಪ್ಪಿದ್ದನ್ನು ಎತ್ತಿ ತೋರಿಸಿ, ಅವರು ಆಡುತ್ತಿರುವ ಸುಳ್ಳಿನ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದು ಇನ್ನಾದರೂ ಸಂಸದರು ಸುಳ್ಳು ಹೇಳುವುದು ಬಿಟ್ಟು ಕೆಲಸ ಮಾಡಿ ತೋರಿಸಲಿ ಎಂದರು.
ಸಭೆಯನ್ನುದ್ದೇಶಿಸಿ ಸಿಪಿಐಎಂ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲಿಯಾನ್, ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್, ಗಡಿನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಸಿದ್ದೀಕ್ ತಲಪಾಡಿ ಮಾತನಾಡಿದರು. ಸಮಾರಂಭದಲ್ಲಿ ಕೋಟೆಕಾರ್ ಬೀಡಿ ಯೂನಿಯನ್ ಅಧ್ಯಕ್ಷರಾದ ಪದ್ಮಾವತಿ ಎಂ ಶೆಟ್ಟಿ , ಕಾರ್ಮಿಕ ಮುಖಂಡ ಜಯಂತ್ ನಾಯ್ಕ್ , ಮಹಾಬಲ ದೆಪ್ಪಲಿಮಾರ್, ಡಿವೈಎಫ್ಐ ಮುಖಂಡರಾದ ರಜಾಕ್ ಮೊಂಟೆಪದವು , ಸುನಿಲ್ ತೆವುಲ, ಅಶ್ರಫ್ ಕೆಸಿ ರೋಡ್, ಹನೀಫ್ ಹರೇಕಳ , ಅಶ್ರಫ್ ಹರೇಕಳ ಉಪಸ್ಥಿತರಿದ್ದರು.