ಕುಂದಾಪುರ ಡಿ 30(SM): ತೀವ್ರ ಅನಾರೋಗ್ಯದಿಂದ ಚಿಕಿತ್ಸೆಫಲಕಾರಿಯಾಗದೇ ನಿಧನರಾದ ದಕ್ಷ ಪೊಲಿಸ್ ಅಧಿಕಾರಿ, ಭ್ರಷ್ಟರಿಗೆ ಸಿಂಹ ಸ್ವಪ್ನರಾಗಿದ್ದ ಐಪಿಎಸ್ ಅಧಿಕಾರಿ, ಮಧುಕರ ಶೆಟ್ಟಿ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಅವರ ತವರೂರಾದ ಯಡಾಡಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಭಾನುವಾರ ಬೆಳಿಗ್ಗೆ ನಡೆಸಲಾಯಿತು.
ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಯಡಾರಿಯಲ್ಲಿರುವ ರೈ ಫಾರ್ಮ್ ತೋಟದಲ್ಲಿ ಹಿರಿಯ ಐ.ಪಿ.ಎಸ್. ಅಧಿಕಾರಿ ಮಧುಕರ್ ಶೆಟ್ಟಿ ಅಂತ್ಯಕ್ರಿಯೆ ನಡೆಸಲಾಯಿತು. ಮಧುಕರ ಶೆಟ್ಟಿ ಮೃತದೇಹಕ್ಕೆ ರಾಷ್ಟ್ರಧ್ವಜ ಹೊದಿಸಿ ಅಂತಿಮ ನಮನ ಸಲ್ಲಿಸಿ, ಉಡುಪಿ ಜಿಲ್ಲಾ ಪೋಲಿಸ್ ವತಿಯಿಂದ ಗೌರವ ವಂದನೆ ಸಲ್ಲಿಸಲಾಯಿತು. ಇದೇ ಸಂದರ್ಭ ಮಧುಕರ್ ಅವರ ಸಮವಸ್ತ್ರಕ್ಕೆ ಗೌರವ ಸಲ್ಲಿಕೆ ನೀಡಿದ ಬಳಿಕ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು.
ರೈ ಪಾರ್ಮ್ ತೋಟದಲ್ಲಿ ಡಿ.ಜಿ.ಪಿ, ಐ.ಜಿ.ಪಿ, ಎಸ್.ಪಿ ದರ್ಜೆಯ ಹಿರಿಯ ಪೋಲಿಸ್ ಅಧಿಕಾರಿಗಳು ಉಪಸ್ಥಿತಿಯಲ್ಲಿ ಕುಂದಾಪುರ ಪರಿಸರದ ಗ್ರಾಮಸ್ಥರು, ಮಧುಕರ್ ಶೆಟ್ಟಿ ಅಭಿಮಾನಿಗಳಿಂದ ಅಂತಿಮ ನಮನ ಸಲ್ಲಿಸಲಾಯಿತು. ಇದೇ ಸಂದರ್ಭ ಹಿರಿಯ ಪೊಲೀಸ್ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.
ಸರ್ಕಾರದ ಪರವಾಗಿ ಸಚಿವ ಯು.ಟಿ. ಖಾದರ್ ರಿಂದ ಅಂತಿಮ ಗೌರವ ಸಲ್ಲಿಸಲಾಯಿತು. ಬಳಿಕ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಗೌರವ ಸಲ್ಲಿಸಿದರು. ಸರ್ಕಾರಿ ಮರ್ಯಾದೆಯಂತೆ ಜಿಲ್ಲಾ ಶಸಸ್ತ್ರ ಮೀಸಲು ಪಡೆಯಿಂದ ಮೂರು ಬಾರಿ ಕುಶಾಲತೋಪು ಹಾರಿಸಿ ಗೌರವ ಸಲ್ಲಿಸಲಾಯಿತು.
ಬಳಿಕ ಮಧುಕರ ಶೆಟ್ಟಿ ಚಿತೆಗೆ 12.15ರ ಸುಮಾರಿಗೆ ಮಧುಕರ ಶೆಟ್ಟಿ ಪುತ್ರಿ ಸೌಮ್ಯ, ಸಹೋದರನ ಪುತ್ರ ಸಾರಂಗ್, ಸಹೋದರರಾದ ಮುರಳೀಧರ್, ಸುಧಾಕರ್ ಚಿತೆಗೆ ಅಗ್ನಿ ಸ್ಪರ್ಷವನ್ನು ನೀಡಿದರು. ಒಟ್ಟಿನಲ್ಲಿ ದಕ್ಷ ಅಧಿಕಾರಿಯೋರ್ವರು ನಮ್ಮನ್ನು ಅಗಲಿ ಹೋಗಿದ್ದಾರೆ, ಪಂಚ ಭೂತಗಳಲ್ಲಿ ಲೀನರಾಗಿದ್ದಾರೆ. ಆದರೆ, ಅವರ ಪ್ರಮಾಣಿಕತೆ ಅವರ ದಕ್ಷತೆ, ದಿಟ್ಟತನ ಸಮಾಜದಲ್ಲಿ ಸದಾ ಅವರನ್ನು ನೆನಪಿಸುತ್ತದೆ.