ಬೆಂಗಳೂರು, ಡಿ31(SS): ಕೇಂದ್ರ ಸಚಿವ ಸದಾನಂದಗೌಡ ಅವರ ಟ್ವೀಟ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.
ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಸದಾನಂದಗೌಡ ಅವರೇ, ನಿಮ್ಮ ಅನುಭವವನ್ನು ಸರಿಯಾಗಿ ಹೇಳಿದ್ದೀರಿ. ಕುದುರೆ ಏರಲಾರದವನು ಶೂರನೂ ಅಲ್ಲ, ಧೀರನೂ ಅಲ್ಲ. ಎಷ್ಟೆಂದರೂ, ಹನ್ನೊಂದು ತಿಂಗಳಲ್ಲಿಯೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಓಡಿಹೋದವರಲ್ವೇ ನೀವು ಎಂದು ಡಿವಿಎಸ್ ಅವರಿಗೆ ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಡಿವಿಎಸ್, ಸಿದ್ದರಾಮಯ್ಯನವರೇ, ನಿಮ್ಮ ರಾಜಕಾರಣದ ಬಗ್ಗೆ ಟೀಕೆ ಮಾಡಿದಾಗ ಸ್ಪರ್ದಾತ್ಮಕವಾಗಿ ತೆಗೆದುಕ್ಕೊಳ್ಳಲಾಗದಷ್ಟು ಅಸಹನೆ ನಿಮಗೆ ಶುರುವಾಗಿದ್ದು ಯಾವಾಗ. ಚಾಮುಂಡೇಶ್ವರಿ ಸೋಲಿನ ಪರಿಣಾಮವೇ? ಅಥವಾ ಮುಖ್ಯಮಂತ್ರಿ ಕುರ್ಚಿ ಕಳೆದುಕೊಂಡ ಮನೋಸ್ಥಿತಿಯೇ? ಎಂದು ಕೇಳಿದ್ದಾರೆ.
ಕಳೆದ ದಿನಗಳ ಹಿಂದೆ ಸಿದ್ದರಾಮಯ್ಯ ಅವರು, ಬಿಜೆಪಿ ಕುದುರೆ ವ್ಯಾಪಾರಕ್ಕೆ ನಿಂತಿದೆ. ಪ್ರತಿ ಶಾಸಕರಿಗೆ 25 ಕೋಟಿ ರೂ. ನಿಂದ 30 ಕೋಟಿ ರೂ. ಹಣ ಕೊಟ್ಟು ಖರೀದಿಸಲು ಮುಂದಾಗಿದೆ. ಸರ್ಕಾರ ಬೀಳಿಸುವುದನ್ನು ಬಿಟ್ಟು ಬಿಜೆಪಿ ಇನ್ನೇನು ಮಾಡಿದೆ ಎಂದು ಟ್ವೀಟ್ ಮಾಡಿದ್ದರು.ಇದು ಬಿಜೆಪಿ ನಾಯಕರನ್ನು ಕೆಂಡಾಮಂಡಲವನ್ನಾಗಿಸಿತ್ತು. ಹಲವಾರು ನಾಯಕರು ಸಿದ್ದುಗೆ ತಿರುಗೇಟು ನೀಡಿದ್ದರು.
ಈ ವೇಳೆ ಕೇಂದ್ರ ಸಚಿವ ಸದಾನಂದಗೌಡ ಅವರು ಕೂಡ ಟ್ವೀಟ್ ಮಾಡಿ, ಕುದುರೆ ಏರಲಾರದವನು ಧೀರನೂ ಅಲ್ಲ ಶೂರನೂ ಅಲ್ಲ. ನಿಮ್ಮ ಪಕ್ಷದ ಹುಳುಕು ಮುಚ್ಚಲು ಇದೊಂದು ಹೊಸ ಪ್ರಹಸನ. ಮುಲಾಜಿನ ಸರಕಾರ ನಡೆಸಲು ಮುಖ್ಯಮಂತ್ರಿಗಳಿಗೆ ಕೈ ಜೋಡಿಸಿ. ನಿಮ್ಮ ಗಿಲೀಟು ಮಾತನ್ನು ನಂಬಲು ಕನ್ನಡಿಗರು ಮುಗ್ಧರು, ಮೂರ್ಖರಲ್ಲ ಎಂದು ಹೇಳಿದ್ದರು.
ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ನಾಯಕರ ಮಧ್ಯೆ ಟ್ವೀಟ್ ವಾರ್ ಮುಂದುವರೆದಿದೆ.