ಬೆಂಗಳೂರು, ಡಿ31(SS): ಆಡಳಿತ ನಡೆಸುತ್ತಿರುವ ಎರಡು ಪಕ್ಷದ ಮುಖಂಡರ ನಡುವಿನ ಕಚ್ಚಾಟದಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕಿಡಿಕಾಡಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಎಸ್ವೈ, ರಾಜ್ಯದಲ್ಲಿ 156 ತಾಲೂಕುಗಳು ಬರದಿಂದ ತತ್ತರಿಸಿ ಹೋಗಿದ್ದು, ಹಲವು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಸಿಎಂ ಕುಮಾರಸ್ವಾಮಿ ಬೇಜವಾಬ್ದಾರಿಯಿಂದ ಹೊಸ ವರ್ಷದ ಸಂಭ್ರಮಾಚರಣೆಗೆ ಸಿಂಗಾಪುರ ಪ್ರವಾಸ ಹೋಗಿದ್ದಾರೆ. ಸಿಎಂ ಎಚ್ಡಿಕೆ ಬೇಜವಾಬ್ದಾರಿ ಸಿಎಂ. ಬರಗಾಲದಿಂದ ರಾಜ್ಯ ಜನತೆ ತತ್ತರಿಸುತ್ತಿದ್ದರೆ ಸಿಎಂ ವಿದೇಶದಲ್ಲಿ ಹೊಸ ವರ್ಷ ಆಚರಣೆ ಮಾಡುವುದು ಎಷ್ಟು ಸರಿ..? ಎಂದು ಪ್ರಶ್ನಿಸಿದ್ದಾರೆ.
ಸಮ್ಮಿಶ್ರ ಸರ್ಕಾರದ ನಾಯಕರು ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದಾರೆ. ಆಡಳಿತ ನಡೆಸುತ್ತಿರುವ ಎರಡು ಪಕ್ಷದ ಮುಖಂಡರ ನಡುವಿನ ಕಚ್ಚಾಟದಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷದಲ್ಲಿ ಗೊಂದಲ ಇದೆ. ಸರ್ಕಾರ ಅಸ್ತಿರಗೊಳ್ಳುತ್ತಿದೆ. ನಾವಾಗಿಯೇ ಸರ್ಕಾರ ಅಸ್ತಿರಗೊಳಿಸುತ್ತಿಲ್ಲ ಎಂದು ಹೇಳಿದರು.
ಒಂದೊಮ್ಮೆ ಸರ್ಕಾರ ತಾನಾಗಿಯೇ ಬಿದ್ದು ಹೋದರೆ ಸುಮ್ಮನೆ ಕೂರಲು ನಾವೇನು ಸನ್ಯಾಸಿಗಳಲ್ಲ. ಹೊಸ ವರ್ಷದಲ್ಲಿ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಅಷ್ಟರ ಮಟ್ಟಿಗೆ ಕಾಂಗ್ರೆಸ್, ಜೆಡಿಎಸ್ ನಲ್ಲಿ ಅತೃಪ್ತಿ, ಅಸಮಾಧಾನ ಜಾಸ್ತಿಯಾಗಿದೆ. ಆದ್ದರಿಂದ ರಾಜ್ಯ ರಾಜಕಾರಣದಲ್ಲಿ ಯಾವಾಗ ಬೇಕಾದರೂ ಏನು ಬೇಕಾದರೂ ಆಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ವೇಳೆ ಸಿದ್ದರಾಮಯ್ಯಅವರ ಟ್ವೀಟ್ ಕುರಿತ ಪ್ರಶ್ನೆಗೆ ಉತ್ತರಿಸಿದ ಬಿಎಸ್ವೈ, ಆಪರೇಷನ್ ಕಮಲದ ಮೂಲಕ ಶಾಸಕರ ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪದೇ ಪದೇ ಬೇಜವಾಬ್ದಾರಿ ಹೇಳಿಕೆ ಕೊಡುತ್ತಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಈ ರೀತಿ ಮಾತನಾಡುವುದು ಶೋಭೆ ತರುವುದಿಲ್ಲ ಎಂದು ತಿಳಿಸಿದರು.