ಉಡುಪಿ, ಡಿ 31(SM): ಮಕ್ಕಳ ಮೇಲೆ ಸರಣಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಪತ್ರಕರ್ತ ಚಂದ್ರ ಕೆ.ಹೆಮ್ಮಾಡಿ ನ್ಯಾಯಾಂಗ ಬಂಧನ ಅವಧಿಯನ್ನು ಜ.11ರವರೆಗೆ ಜಿಲ್ಲಾ ಪ್ರದಾನ ಹಾಗೂ ಪೋಕ್ಸೊ ವಿಶೇಷ ನ್ಯಾಯಾಲಯ ವಿಸ್ತರಿಸಿದೆ. ಆರೋಪಿಯ ನ್ಯಾಯಾಂಗ ಬಂಧನ ಅವಧಿ ಡಿ.31ಕ್ಕೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಸೋಮವಾರ ಹಿರಿಯಡ್ಕ ಜೈಲಿನಿಂದ ಕರೆತಂದು ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ಆರೋಪಿಯ ವಿರುದ್ಧ ಬೈಂದೂರು ಠಾಣೆಯಲ್ಲಿ ದಾಖಲಾದ ಒಂದು ಪೋಕ್ಸೊ ಪ್ರಕರಣದಲ್ಲಿ ಬಂಧನದ ಅವಧಿಯನ್ನು ವಿಸ್ತರಿಸುವಂತೆ ಹಾಗೂ ಉಳಿದ 20 ಪ್ರಕರಣಗಳಲ್ಲಿ ಬಾಡಿ ವಾರೆಂಟ್ ಅವಧಿ ವಿಸ್ತರಿಸುವಂತೆ ತನಿಖಾಧಿಕಾರಿಯಾದ ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.
ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಆರೋಪಿಗೆ ಜ.11ರವರೆಗೆ ನ್ಯಾಯಾಂಗ ಬಂಧನ ಹಾಗೂ ಬಾಡಿ ವಾರೆಂಟ್ ಅವಧಿಯನ್ನು ವಿಸ್ತರಿಸಿತು. ಬಳಿಕ ಆರೋಪಿಯನ್ನು ಬಿಗಿ ಬಂದೋಬಸ್ತ್ನಲ್ಲಿ ಮತ್ತೆ ಹಿರಿಯಡ್ಕ ಜೈಲಿಗೆ ಕರೆದೊಯ್ಯಲಾಯಿತು.
ಚಂದ್ರ ಹೆಮ್ಮಾಡಿ ವಿರುದ್ಧ ಬೈಂದೂರು, ಗಂಗೊಳ್ಳಿ, ಕುಂದಾಪುರ, ಕೊಲ್ಲೂರು ಠಾಣೆಗಳಲ್ಲಿ 21 ಪೋಕ್ಸೊ ಪ್ರಕರಣಗಳು ದಾಖಲಾಗಿವೆ. ಆರೋಪಿಯೊಬ್ಬನ ವಿರುದ್ಧ ರಾಜ್ಯದಲ್ಲೇ ದಾಖಲಾದ ಗರಿಷ್ಠ ಪೋಕ್ಸೋ ಪ್ರಕರಣ ಇದಾಗಿದೆ.