ಕಾಸರಗೋಡು,ಜ 01(MSP): 13 ಹರೆಯ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಅಪರಾಧಿಗೆ ನ್ಯಾಯಾಲಯ ಪೋಕ್ಸೊ ಕಾನೂನಿನಂತೆ ಗರಿಷ್ಠ ಶಿಕ್ಷೆಯಾದ ಜೀವಾವಧಿ ಜೈಲು ಶಿಕ್ಷೆಗೆ ಆದೇಶಿಸಿದೆ. ಕುಬಣೂರು ಪಚ್ಚಂಬಳ್ಳ ಪಂಜತೊಟ್ಟಿ ನಿವಾಸಿ ಅಬ್ದುಲ್ ಕರೀಂ (34) ಅಪರಾಧಿ ಎಂದು ಕಾಸರಗೋಡು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪಿ. ಎಸ್.ಶಶಿಕುಮಾರ್ ಆದೇಶಿಸಿದ್ದು, ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಪೋಕ್ಸೊ ಅಡಿ ಗರಿಷ್ಠ ಶಿಕ್ಷೆ ನೀಡಿರುವ ಕೇರಳ ರಾಜ್ಯದ ಮೊದಲ ಪ್ರಕರಣ ಇದಾಗಿದೆ.
ಜೀವಾವಧಿ ಶಿಕ್ಷೆಗೆ ಹೊರತುಪಡಿಸಿ ಭಾರತೀಯ ದಂಡ ಸಂಹಿತೆ 506 ರಂತೆ 3 ವರ್ಷ ಹಾಗೂ 324 ರಂತೆ 2 ವರ್ಷ ಹೆಚ್ಚುವರಿ ಕಠಿಣ ಶಿಕ್ಷೆ, ಸಂತ್ರಸ್ತೆಗೆ 50 ಸಾವಿರ ನಷ್ಟ ಪರಿಹಾರ ನೀಡಲು ಆದೇಶದಲ್ಲಿ ತಿಳಿಸಲಾಗಿದೆ. ಇದಲ್ಲದೆ ಪರಿಹಾರ ನಿಧಿಯಿಂದ ಬಾಲಕಿಗೆ ಆರ್ಥಿಕ ನೆರವು ಒದಗಿಸುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಿದೆ. ಇನ್ನು ಪ್ರಕರಣ ನಡೆದು 90 ದಿನಗಳಲ್ಲೇ ಪೊಲೀಸರು ತನಿಖೆ ಪೂರ್ತಿಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿರುವುದರಿಂದ ಆರೋಪಿಗೆ ಜಾಮೀನು ನಿರಾಕರಿಸಲಾಗಿತ್ತು.
2018 ಎಪ್ರಿಲ್ 2 ರಂದು ನಾಲ್ಕರಂದು ಕ್ವಾರ್ಟರ್ಸ್ ಒಂದರಲ್ಲಿ ಹುಡುಗಿಯ ತಾಯಿಗೆ ಚೂರಿ ತೋರಿಸಿ, ಆಕೆಯ ಜತೆ ನಿದ್ರಿಸಿದ್ದ ಹುಡುಗಿಯ ಮೇಲೆ ಆರೋಪಿ ಅತ್ಯಾಚಾರ ಮಾಡಿದ್ದ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಬಾಲಕಿಯೇ ನೇರವಾಗಿ ಮಂಜೇಶ್ವರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಳು. ಪೊಲೀಸರು ಪ್ರಕರಣ ದಾಖಲಿಸಿದ್ದರು.