ಸುರತ್ಕಲ್,ಜ 01(MSP): ಮಂಗಳೂರಿನಿಂದ ಉಡುಪಿಯಿಂದ ಕಡೆಗೆ ಬರುತ್ತಿದ್ದ ಕಾರೊಂದು ಟಯರ್ ಪಂಕ್ಚರ್ ಆಗಿ ನಿಯಂತ್ರಣ ತಪ್ಪಿ, ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದು ಡಿವೈಡರ್, ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ವಿಸ್ ರಸ್ತೆ ದಾಟಿ ನಿಂತ ಘಟನೆ ಸುರತ್ಕಲ್ ತಡಂಬೈಲ್ ಬಳಿ ಜ.1 ರ ಮಂಗಳವಾರ ನಡೆದಿದೆ.
ಹೊಸವರ್ಷ ಮುಂಜಾನೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹಮೀದ್ ಎಂಬವರು ಚಲಾಯಿಸುತ್ತಿದ್ದ ಪಜೆರೋ ಸ್ಪೋಟ್ಸ್ ಕಾರ್ ಸುರತ್ಕಲ್ ತಡಂಬೈಲ್ ಬಳಿ ಬರುತ್ತಿದ್ದಂತೆ ಟಯರ್ ಪಂಕ್ಚರ್ ಆಗಿದೆ. ಪರಿಣಾಮ ನಿಯಂತ್ರಣ ತಪ್ಪಿದ ಕಾರು ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿದೆ. ಅಲ್ಲದೆ ಡಿಕ್ಕಿಯ ರಭಸಕ್ಕೆ ಬಲ ಬದಿಯ ರಾಷ್ಟ್ರೀಯ ಹೆದ್ದಾರಿ, ಡಿವೈಡರ್ ಹಾಗೂ ಸರ್ವಿಸ್ ರಸ್ತೆ ದಾಟಿ ಬಂದು ಕಾರು ನಿಂತಿದೆ. ಅಪಘಾತದ ಪರಿಣಾಮ ಕಾರಿನ ಮುಂಬಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರು ಚಲಾಯಿಸುತ್ತಿದ್ದ ಹಮೀದ್ ಯಾವುದೇ ಗಾಯಗಳಿಲ್ಲದೆ ಅದೃಷ್ಟಾವಶಾತ್ ಪಾರಾಗಿದ್ದಾರೆ. ಕಾರಿನಲ್ಲಿದ್ದ ಸಹ ಪ್ರಯಾಣಿಕರಾದ ಮಹೇಶ್ ಮತ್ತು ಇಸ್ಮಾಯಿಲ್
ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತೆಗೆ ದಾಖಲಾಗಿದೆ.
ಘಟನೆ ಬಗ್ಗೆ ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.