ವಿಟ್ಲ, ಜ 02(SM): ಮೊಬೈಲ್ ಅಂಗಡಿಗೆ ಹಾಡು ಹಾಕಲು ತೆರಳಿದ್ದ ಅನ್ಯಧರ್ಮದ ಬಾಲಕಿ ಮೇಲೆ ಅಂಗಡಿ ಮಾಲಕ ಮೈ ಮೇಲೆ ಕೈ ಹಾಕಿ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಣಿ ಗ್ರಾಮದ ಎಂಟು ವರ್ಷ ಪ್ರಾಯದ ಅಪ್ರಾಪ್ತೆ ಗಡಿಯಾರ ಸಮೀಪದ ಸತ್ತಿಕಲ್ಲು ನಿವಾಸಿ ಸಲಾಂ(30) ಎಂಬಾತನ ಮಾಣಿಯಲ್ಲಿರುವ ಮೊಬೈಲ್ ಅಂಗಡಿಗೆ ಹಾಡು ಹಾಕಲೆಂದು ತೆರಳಿದ್ದಳು. ಈ ಸಂದರ್ಭ ಆರೋಪಿ ಸಲಾಂ ಹಾಡು ಹಾಕುವ ನೆಪದಲ್ಲಿ ಬಾಲಕಿಯ ಮೈ ಮೇಲೆ ಕೈ ಹಾಕಿ ಲೈಂಗಿಕ ದೌರ್ಜನ್ಯ ಎಸೆಗಿದ್ದಾನೆ.
ಈ ಬಗ್ಗೆ ಬಾಲಕಿ ಮನೆಯಲ್ಲಿ ತಿಳಿಸಿದ್ದು, ಇದರಿಂದ ಎಚ್ಚೆತ್ತ ಬಾಲಕಿ ಹೆತ್ತವರು ವಿಟ್ಲ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಬಜರಂಗದಳ ಆಕ್ರೋಶ:
ಈ ಘಟನೆ ಬಗ್ಗೆ ವಿಟ್ಲ ಪ್ರಖಂಡ ಬಜರಂಗದಳದ ಸಂಚಾಲಕ ಅಕ್ಷಯ್ ರಜಪೂತ್ ಕಲ್ಲಡ್ಕ ಅವರು ಘಟನೆಯನ್ನು ಖಂಡಿಸಿದ್ದು, ಇಂತಹ ಹೀನ ಕೃತ್ಯವೆಸಗಿದ ಸಲಾಂ ತನ್ನ ವಿರುದ್ಧ ಪ್ರಕರಣ ದಾಖಲಾಗಿರುವುದು ತಿಳಿಯುತ್ತಿದ್ದಂತೆ ಇದೀಗ ಆತ ತಲೆ ಮರೆಸಿಕೊಂಡಿದ್ದಾನೆ. ಪೊಲೀಸ್ ಅಧಿಕಾರಿಗಳು ಆರೋಪಿಯನ್ನು ಶೀಘ್ರವಾಗಿ ಬಂಧಿಸದಿದ್ದಲ್ಲಿ ಬಜರಂಗದಳ ಹಾಗೂ ಮತ್ತಿತರ ಹಿಂದೂ ಪರ ಸಂಘಟನೆಗಳು ಒಗ್ಗಟ್ಟಾಗಿ ಮಾಣಿ ನಗರದ ಸಂಪೂರ್ಣ ಬಂದ್ ಗೆ ಕರೆ ನೀಡಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.