ಬೆಳ್ತಂಗಡಿ,ಜ 02(MSP): ಸರಕಾರದ ಇಂದಿರಾ ಆವಾಸ್ ವಸತಿ ಯೋಜನೆಯ ಫಲಾನುಭವಿಗಳಿಗೆ ನೀಡುವುದಕ್ಕಾಗಿ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಂ.ಪಂ ಗೆ ಬಂದ ಹಣವನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳಿಗೆ ಬೆಳ್ತಂಗಡಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
2009 ರಲ್ಲಿ ಈ ಪ್ರಕರಣ ನಡೆದಿದ್ದು, 1 ನೇ ಆರೋಪಿ ಗ್ರಾ.ಪಂ ನ ಅಂದಿನ ಕಾರ್ಯದರ್ಶಿ, ಶೀನ ಹಾಗೂ 2ನೇ ಆರೋಪಿ ಅಂದಿನ ಅಧ್ಯಕ್ಷ ಮಹೇಶ್ ಗೆ ನ್ಯಾಯಾಲಯವು ಕಲಂ 409 ಜತೆಗೆ 34 ಐಪಿಸಿಯಂತೆ ಒಂದು ವರ್ಷ ಶಿಕ್ಷೆ ಹಾಗೂ 5ಸಾವಿರ ದಂಡ , ಕಲಂ 420 ಜತೆಗೆ 34 ಐಪಿಸಿಯಂತೆ 6 ತಿಂಗಳ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿದೆ.
ರಾಷ್ಟ್ರೀಕೃತ ಬ್ಯಾಂಕೊಂದರ ಬೆಳ್ತಂಗಡಿ ಶಾಖೆಯಲ್ಲಿದ್ದ ಇಂದಿರಾ ಆವಾಸ್ ವಸತಿ ಯೋಜನೆಯ ಗ್ರಾ.ಪಂ ಖಾತೆಗೆ ಬಂದಿದ್ದ 3,05,000 ರೂ.ಗಳನ್ನು ಇಬ್ಬರೂ ಸೇರಿ ಚೆಕ್ ಗೆ ಸಹಿ ಹಾಕಿ ಅದೇ ಬ್ಯಾಂಕಿನಲ್ಲಿದ್ದ ಕಾರ್ಯದರ್ಶಿಯ ಖಾತೆಗೆ ವರ್ಗಾವಣೆ ಮಾಡಿ ಗ್ರಾ.ಪಂ ನ ಹಣವನ್ನು ದುರುಪಯೋಗ ಪಡಿಸಿಕೊಂಡು ಫಲಾನುಭವಿಗಳಿಗೆ ವಂಚಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಕೆ.ನಾಗೇಶ್ ಹಾಗೂ ಬಿ.ಕೆ ಮಂಜಯ್ಯ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಬೆಳ್ತಂಗಡಿ ಸಿವಿಲ್ ಮತ್ತು ಜೆ.ಎಂಎಫ್ ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಬಿ.ಕೆ ಕೋಮಲಾ ಅವರು ಶಿಕ್ಷೆ ಪ್ರಕಟಿಸಿದ್ದಾರೆ. ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕ ಜಿ.ಕೆ ಕಿರಣ್ ಕುಮಾರ್ ಅವರು ವಾದಿಸಿದ್ದರು.