ಕಾಸರಗೋಡು, ಜ 02(MSP): ಮಂಗಳವಾರ ಸಂಜೆ ನಡೆದ ಮಹಿಳಾ ಗೋಡೆಯಲ್ಲಿ ಪಾಲ್ಗೊಂಡು ತೆರಳುತ್ತಿದ್ದ ಬಸ್ಸು,ವಾಹನಗಳ ಮೇಲೆ ಕಲ್ಲೆಸೆದ ಘಟನೆ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ.ಈ ಪೈಕಿ ಇಬ್ಬರು ಮಹಿಳೆಯರ ಸ್ಥಿತಿ ಗಂಭೀರವಾಗಿದೆ. ಕೃತ್ಯದ ಹಿಂದೆ ಬಿಜೆಪಿ - ಸಂಘ ಪರಿವಾರ ಕಾರ್ಯಕರ್ತರು ಕೈವಾಡ ಆರೋಪಿಸಲಾಗಿದೆ.
ಕಾಸರಗೋಡಿನಿಂದ ಅಂಗಡಿಮೊಗರಿಗೆ ತೆರಳುತ್ತಿದ್ದ ಬಸ್ಸಿನ ಮೇಲೆ ಕುದ್ರೆಪ್ಪಾಡಿಯಲ್ಲಿ ಕಲ್ಲೆಸೆದ ಪರಿಣಾಮ ಇಬ್ಬರು ಮಹಿಳೆಯರು ಗಂಭೀರ ಗಾಯಗೊಂಡಿದ್ದಾರೆ. ಪುತ್ತಿಗೆ ಕಂದಾಲ್ ನ ಅವ್ವಾಬಿ (35), ಪುತ್ತಿಗೆಯ ಸರಸ್ವತಿ ರವರನ್ನು ಮಂಗಳೂರು ಹಾಗೂ ಪುತ್ತಿಗೆಯ ಬಿಂದು (36) , ಪೆರ್ಲಡ್ಕದ ಪಿ . ಎಂ ಅಬ್ಬಾಸ್ (45) ರವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಸ್ವತಿ ಮತ್ತು ಅವ್ವಾಬಿಯವರ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಚೇಟುಕುಂಡುವಿನಲ್ಲಿ ಮಹಿಳಾ ಗೋಡೆ ಕಾರ್ಯಕ್ರಮವನ್ನು ವಿಫಲಗೊಳಿಸುವ ಯತ್ನ ನಡೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ನಾಲ್ಕು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು. ಕಲ್ಲೆಸೆತದಿಂದ ಪೊಲೀಸರು ,ಬಿಜೆಪಿ - ಸಿಪಿಎಂ ಕಾರ್ಯಕರ್ತರು ಗಾಯಗೊಂಡಿದ್ದಾರೆ.ಚೇಟುಕುಂಡು ವಿನಲ್ಲಿ ಮಹಿಳಾ ಗೋಡೆ ಹಾದುಹೋಗುವ ರಸ್ತೆ ಬದಿಯ ಹುಲ್ಲು, ಪೊದೆಗಳಿಗೆ ಬೆಂಕಿ ಹಚ್ಚಿತ್ತು . ದಟ್ಟಹೊಗೆಯು ಆವರಿಸಿತ್ತು . ಮಹಿಳಾ ಗೋಡೆಗೆ ಆಗಮಿಸಿದ್ದವರ ಮೇಲೆ ಕಲ್ಲೆಸೆಯಲಾಗಿದ್ದು , ಈ ಸಂದರ್ಭದಲ್ಲಿ ಸಿಪಿಎಂ - ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಹಿಂಸಾಚಾರ ನಡೆಯಿತು. ಸ್ಥಳಕ್ಕೆ ತಲಪಿದ ಪೊಲೀಸರು ಲಾಠಿಪ್ರಹಾರ ಹಾಗೂ ಅಶ್ರುವಾಯು ಸಿಡಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು.ವರದಿಗಾರರ ಮೇಲೂ ಹಲ್ಲೆ ನಡೆಸಿದ್ದು, ಎರಡು ಖಾಸಗಿ ವಾಹಿನಿಗಳ ಕ್ಯಾಮರಾಗಳನ್ನು ಹಾಳುಗೆಡವಲಾಗಿದೆ.
ಅಹಿತಕರ ಘಟನೆ ಹಿನ್ನಲೆಯಲ್ಲಿ ಪೊಲೀಸರು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿದ್ದಾರೆ .
200 ಕ್ಕೂ ಅಧಿಕ ಮಂದಿ ವಿರುದ್ಧ ಕೇಸು ದಾಖಲು
ಘಟನೆಗೆ ಸಂಬಂಧಪಟ್ಟಂತೆ 200 ರಷ್ಟು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ .